udayanews

ಶನಿವಾರ, ಜನವರಿ 23, 2021

ಜ 26 ರಂದು ದೆಹಲಿ ಮತ್ತು ಬೆಂಗಳೂರಿನಲ್ಲಿ ಜನ ಗಣರಾಜ್ಯೋತ್ಸವ


 ಚಿಕ್ಕಮಗಳೂರು :ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನ ವಿರೋಧಿ ಕಾಯ್ದೆಗಳನ್ನು ಹಿಂದೆ ಪಡೆಯದೇ ಇದ್ದರೆ ಜನವರಿ ೨೬ ರಂದು ದೆಹಲಿ ಹಾಗೂ ಬೆಂಗಳೂರಿನಲ್ಲಿ ಜನರ ಗಣರಾಜ್ಯೋ ತ್ಸವ ನಡೆಯಲಿದೆ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ .

ಗಣರಾಜ್ಯೋತ್ಸವ ಸಂದೇಶ ಮುಗಿದ ತಕ್ಷಣ ಎರಡೂ ಕಡೆಗಳಲ್ಲಿ ರೈತರು ಸಾವಿರಾರು ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ನೊಂದಿಗೆ ರಾಷ್ಟ್ರಧ್ವಜ ಹಿಡಿದು ನಗರವನ್ನು ಪ್ರವೇಶಿಸಲಿದ್ದಾರೆ ಎಂದು ಹೇಳಿದರು .

ಕರೋನ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡಿರುವ ಸರ್ಕಾರಗಳು ಜನವಿರೋಧಿ ಕಾಯಿದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿವೆ .ಸಾರ್ವಜನಿಕ ಸೇವಾ ವಲಯಗಳನ್ನು ಖಾಸಗೀಕರಣ ಮಾಡುತ್ತಿವೆ ಎಂದು ಆರೋಪಿಸಿದರು .

ಪ್ರಪಂಚದ ಇತರ ಅನೇಕ ರಾಷ್ಟ್ರಗಳೂ ರೈತರ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿವೆ.  ನಮ್ಮ ಪ್ರಧಾನಿಗಳು ಮೌನವಾಗಿದ್ದಾರೆ ಎಂದು ಕಿಡಿಕಾರಿದರು. 

ಚಿಕ್ಕಮಗಳೂರು ರೆಸಾರ್ಟ್ ನಲ್ಲಿ ಸಚಿವರ ರಹಸ್ಯ ಸಭೆ


 ಚಿಕ್ಕಮಗಳೂರು :ಇಲ್ಲಿನ ಖಾಸಗಿ ರೆಸಾರ್ಟ್ನಲ್ಲಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ರಹಸ್ಯ ಸಭೆ ಅನೇಕ ಕುತೂಹಲಗಳಿಗೆ ದಾರಿ ಮಾಡಿಕೊಟ್ಟಿದೆ .

ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನೆಪದಲ್ಲಿ ಆಗಮಿಸಿದ ಸಚಿವರು ರೆಸಾರ್ಟ್ ನಲ್ಲಿ ತಂಗಿದ್ದರು .

ಅಲ್ಲಿಗೆ ಸಚಿವರಾದ ಗೋಪಾಲಯ್ಯ ,ಸಿ ಪಿ ಯೋಗೇಶ್ವರ್ ,ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ನಂದೀಶ್ ರೆಡ್ಡಿ ಹಾಗೂ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಆಗಮಿಸಿದ್ದು ರಹಸ್ಯ ಸಭೆ ನಡೆದಿದೆ 

    ಇತ್ತೀಚೆಗೆ ಸಚಿವರ ಖಾತೆ ಬದಲಾವಣೆ ನಂತರದ ಮುನಿಸಿನ ಹಿನ್ನೆಲೆಯಲ್ಲಿ ನಡೆದ ಈ ಸಭೆಗೆ ಸಹಜವಾಗಿಯೇ ಮಹತ್ವ ಬಂದಿದೆ . ಕುಮಾರಸ್ವಾಮಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಅಸಮಾಧಾನವೂ ಇದೆ 

ಹಂಪನಾ ಪರ ಏಕೆ ನಿಲ್ಲಬೇಕು ? ಸೂರಿಂಜೆ ಪ್ರಶ್ನೆ


 ಸಾಹಿತಿ ಹಂಪ ನಾಗರಾಜಯ್ಯ ಅವರು ಪೊಲೀಸ್ ಠಾಣೆಯಲ್ಲಿ ಎದುರಿಸಿದ ಪರಿಸ್ಥಿತಿಯೇ ದಲಿತರು, ಮುಸ್ಲೀಮರು ಎದುರಿಸಿದ ಪರಿಸ್ಥಿತಿಯಾಗಿದೆ. ಆಳ್ವಾಸ್, ಧರ್ಮಾಸ್ಥಳ, ಹಿಂದುತ್ವ ನಾಯಕರ ಜೊತೆ ಯಾವ ಮುಲಾಜೂ ಇಲ್ಲದೇ ವೇದಿಕೆ ಹಂಚಿಕೊಳ್ಳುತ್ತಿದ್ದ ಹಂಪ ನಾಗರಾಜಯ್ಯ ಅವರಿಗೆ ಈಗ ವಸ್ತುಸ್ಥಿತಿ ಅರ್ಥ ಆಗಿರಬಹುದು. 

ಮಂಡ್ಯ ಪೊಲೀಸರು ಸಾಹಿತಿ ಹಂಪ ನಾಗರಾಜಯ್ಯ ಅವರನ್ನು ಕರೆಸಿ ವಿಚಾರಣೆ ಮಾಡಿದ್ದು ತಪ್ಪು. ಹಾಗಂತ ಸಾಹಿತಿಗಳು, ಪತ್ರಕರ್ತರಿಗೇನು ಕೊಂಬು ಇರುವುದಿಲ್ಲ. ಈ ಹಿಂದೆ ಸಾಮಾನ್ಯ ಜನರ ಮೇಲೆ, ಅಲ್ಪಸಂಖ್ಯಾತರ ಮೇಲೆ ಇದೇ ರೀತಿ ಹಿಂದುತ್ವವಾದಿಗಳು ದಾಳಿ ನಡೆಸಿದಾಗ ಈ ಸಾಹಿತಿಗಳು, ಪತ್ರಕರ್ತರು ಎಲ್ಲಿದ್ದರು ? ಯಾರ ಜೊತೆ ನಿಂತಿದ್ದರು ? ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದರೇ ? ಎಂಬುದು ಮುಖ್ಯವಾಗುತ್ತದೆ. ಅದರ ಆಧಾರದ ಮೇಲೆ ಸಾಹಿತಿಗಳು, ಪತ್ರಕರ್ತರ ಜೊತೆ ಸಮಾಜ ನಿಲ್ಲುತ್ತದೆ. 

ಮಂಗಳೂರಿನಲ್ಲಿ ಯಥೇಚ್ಚವಾಗಿ ನೈತಿಕ ಪೊಲೀಸ್ ಗಿರಿ, ಮುಸ್ಲೀಮರ ಮೇಲೆ ದಾಳಿ, ಚರ್ಚ್ ಮೇಲೆ ದಾಳಿ ನಡೆಯುವಾಗ ವಿಹಿಂಪ ಗೌರವಾಧ್ಯಕ್ಷ ಆಯೋಜಿಸುವ ಸಾಹಿತ್ಯ ಕೂಟದ ನೇತೃತ್ವ ವಹಿಸುವುದು, ಸೌಜನ್ಯ ಕೊಲೆಯಾದಾಗ ಆರೋಪ ಎದುರಿಸುತ್ತಿರುವ ಮುಂಡಾಸಿನವರ ಪರ ನಿಂತ ಹಂಪ ನಾಗರಾಜಯ್ಯ ಜೊತೆ ಜನ ಯಾಕೆ ನಿಲ್ಲಬೇಕು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಆದರೂ, ಹಂಪ ನಾಗರಾಜಯ್ಯ ಎದುರಿಸಿದ ಪರಿಸ್ಥಿತಿ ಯಾರಿಗೇ ಬಂದರೂ ಖಂಡನೀಯ. ಅದು ಇಂದಿನ ಅಸಹಿಷ್ಣುತೆಯನ್ನು ತೋರಿಸುತ್ತದೆ. ಆದ್ದರಿಂದ ಈ ಅಸಹಿಷ್ಣುತೆಯನ್ನು ನಾವೆಲ್ಲರೂ ಖಂಡಿಸಬೇಕಿದೆ.


- ನವೀನ್ ಸೂರಿಂಜೆ

* ನಾನೊಬ್ಬ ಸಾಹಿತ್ಯ ಅಜ್ಞಾನಿ,

ಹೆಚ್ಚು ಓದಿಲ್ಲ. ಪತ್ರಕರ್ತನಾಗಿ ಮಾಹಿತಿ ಪಡೆಯುವ ಉದ್ದೇಶ ಅಷ್ಟೆ. ಖಂಡಿತ ಇದರಲ್ಲಿ ವ್ಯಂಗ್ಯ ಇಲ್ಲ.

ಹಂಪನಾ ಅವರು ಹಿಂದೆ ಎಂದಾದರೂ ಪ್ರಭುತ್ವದ ವಿರುದ್ದ ಮಾತನಾಡಿದ್ದರೆ ದಯವಿಟ್ಟು ತಿಳಿಸಿ.

*ದಿನೇಶ್ ಅಮಿನ್ ಮಟ್ಟು 

ಬದಲಾಗುವುದೇ ಶಕ್ತಿ ಕೇಂದ್ರದ ಹೆಸರು ?


 ಚಿಕ್ಕಮಗಳೂರು :ತಾಲ್ಲೂಕು ಆಡಳಿತ ಶಕ್ತಿ ಕೇಂದ್ರ 'ಮಿನಿ ವಿಧಾನಸೌಧ'ದ ಹೆಸರು ಬದಲಾಗುವುದೇ ?

ಇಂತಹ ಒಂದು ಆಲೋಚನೆ ಚರ್ಚೆ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿದೆ .

    ತಾಲ್ಲೂಕು ಕೇಂದ್ರದಲ್ಲಿ ಇರುವ ಸರ್ಕಾರಿ ಕಚೇರಿಗಳ ಸಂಕೀರ್ಣವನ್ನು ಮಿನಿ ವಿಧಾನಸೌಧ ಎಂದು ಈಗ ಕರೆಯಲಾಗುತ್ತಿದೆ .

ಕೆಲವರಿಗೆ ಈ ಹೆಸರು ಹಿಡಿಸಿಲ್ಲ. ಬದಲಾಗಿ 'ತಾಲ್ಲೂಕು ಆಡಳಿತ ಸೌಧ 'ಎಂದು  ಮರುನಾಮಕರಣ ಮಾಡಬೇಕು ಎನ್ನುವ ಅಪೇಕ್ಷೆ ಹಲವರದು .

ಇದಕ್ಕೆ ಪೀಠಿಕೆ ಹಾಕಿ ಸರ್ಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲಹಾ ಪತ್ರ ಬರೆದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಚಂದ್ರಶೇಖರ್ .

ಈ ಚಿತ್ರಕ್ಕೆ ಈಗ ಜೀವ ಬಂದಿದೆ .ಸಲಹೆಯನ್ನು ಪರಿಗಣಿಸುವಂತೆ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.

ಕಂದಾಯ ಇಲಾಖೆ ಸಚಿವ ಆರ್ ಅಶೋಕ್ ಪರಿಶೀಲಿಸಿ ಪ್ರಸ್ತಾವನೆ ಮಂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ .

ಈ ಎಲ್ಲ ಪ್ರಯತ್ನಗಳ ಹಿಂದೆ ಇಲ್ಲಿನ ಕಂದಾಯ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಂದೀಶ್ ,    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವೀರಣ್ಣ ಶೆಟ್ಟಿ ಪಾತ್ರವೂ ಇದೆ . ಹೆಸರಂತೂ ಬದಲಾಗುವುದು ಖಚಿತ .ಆದರೆ ಅಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿ ಮನಸ್ಥಿತಿ ಬದಲಾಗುವುದು ಮುಖ್ಯ !    

ಶುಕ್ರವಾರ, ಜನವರಿ 22, 2021

ಚಿಕ್ಕಮಗಳೂರು ನಗರಸಭೆ :ಮೀಸಲಾತಿ ಪ್ರಕಟ



 ಚಿಕ್ಕಮಗಳೂರು: ನಗರಸಭೆ ವಾರ್ಡ್ ಮೀಸಲಾತಿ  ಕೊನೆಗೂ ಪ್ರಕಟವಾಗಿದೆ .ಈ ಹಿಂದೆ ಮೀಸಲಾತಿ ಪ್ರಕಟವಾಗಿದ್ದ ಸಂದರ್ಭದಲ್ಲಿ ಆಡಳಿತ ಬಿಜೆಪಿಯ ಕೆಲವರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು . 

ಇದರಿಂದಾಗಿ ಕಳೆದ 2ವರ್ಷಗಳಿಂದ ನಗರಸಭೆಗೆ ಚುನಾವಣೆ ನಡೆಯದೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದವು.

ಕೊನೆಗೂ ಮೀಸಲಾತಿ ಪ್ರಕಟವಾಗಿದ್ದು' ಸದ್ಯದಲ್ಲೇ ಚುನಾವಣೆ ನಡೆಯುವ ನಿರೀಕ್ಷೆಯೂ ಇದೆ .ಜಿಲ್ಲಾ ಕೇಂದ್ರ ಅಭಿವೃದ್ಧಿ ಕಾರ್ಯಗಳಲ್ಲಿ ತೀವ್ರ ಹಿನ್ನಡೆ ಸಾಧಿಸಿದ್ದು , ನಗರಸಭೆ ಚುನಾವಣೆಯಲ್ಲಿ ಹಿನ್ನಡೆ ಆಗುವ ಸಾಧ್ಯತೆಗಳು  ಇರುವುದನ್ನು ಗಮನಿಸಿ ಆಡಳಿತ ಪಕ್ಷದವರು ಉದ್ದೇಶಪೂರ್ವಕವಾಗಿ ನ್ಯಾಯಾಲಯದಿಂದ ತಡೆ ತಂದಿದ್ದರು  ಎನ್ನುವ ಆರೋಪವೂ ಇದೆ .

ಕುವೆಂಪು ವಿವಿ :ಪದವಿ ಸೇರಲು ಜ .31ರವರೆಗೆ ಅವಕಾಶ


  ಚಿಕ್ಕಮಗಳೂರು :ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯಎಲ್ಲಾ ಕಾಲೇಜುಗಳಲ್ಲಿ ಪದವಿ ತರಗತಿಗೆ ಸೇರಲು ಜನವರಿ 31 ರವರೆಗೆ ಅವಕಾಶಕಲ್ಪಿಸಲಾಗಿದೆ .

 ಕಡೂರಿನಲ್ಲಿ ನಡೆದವಿವಿಯ ಸಿಂಡಿಕೇಟ್ ಸಭೆಯಲ್ಲಿ  ತೀರ್ಮಾನ ಮಾಡಲಾಗಿದೆ.

ಅನೌಪಚಾರಿಕ ತೆಗೆದುಕೊಂಡ ಈ ತೀರ್ಮಾನ ನೂರಾರು ಪದವಿ ಸೇರುವ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಿದೆ.

ಮಲೆನಾಡಿನ ಮಕ್ಕಳು ಕೋವಿಡ್-19 ಸಂಕಷ್ಟದಿಂದ  ಹಾಸ್ಟೆಲ್ ತೊರೆದು   ಆರ್ಥಿಕ ತೊಂದರೆಗೆ ಸಿಲುಕಿದ್ದ ಮಲೆನಾಡಿನ ವಿದ್ಯಾರ್ಥಿಗಳು ಮೈಗ್ರಷನ್ ಸರ್ಟಿಫಿಕೇಟ್ ಪಡೆದು ಅಡ್ಮಿಷನ್ ಆಗುವಾಗ ಕಾಲೇಜು ಸೇರುವ ಅಂತಿಮದಿನ ಮುಗಿದಿತ್ತು.

ಇದನ್ನು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಅವರ ಗಮನಕ್ಕೆ  ತಂದಾಗ ಸಚಿವರುವಿವಿಯವಿ.ಸಿ.ಯನ್ನುಕರೆಸಿವಿದ್ಯಾರ್ಥಿಗಳಅಡ್ಮಿಷನ್ ಮಾಡಿಕೊಳ್ಳಲು ಕಾಲಾವಕಾಶ ವಿಸ್ತರಿಸಲು ಸೂಚನೆ ನೀಡಿದ   ಹಿನ್ನೆಲೆ ಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ .

ಅರಣ್ಯ ಹಕ್ಕು ಕಾಯ್ದೆ ಸರಳೀಕರಣಕ್ಕೆ ಒತ್ತಾಯ


 ಚಿಕ್ಕಮಗಳೂರು :ಈಗಾಗಲೇ ಜಾರಿಗೆ ತಂದಿರುವ ಅರಣ್ಯ ಹಕ್ಕು ಕಾಯ್ದೆಯನ್ನು ಇನ್ನಷ್ಟು ಸರಳೀಕರಣ ಗೊಳಿಸುವಂತೆ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ ಒತ್ತಾಯಿಸಿದ್ದಾರೆ .

ಮಲೆನಾಡು ಅಭಿವೃದ್ಧಿ ಮಂಡಳಿ ಕಾರ್ಯಚಟುವಟಿಕೆಗಳ ಕುರಿತು ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ ಈಗ ಜಾರಿಯಲ್ಲಿರುವ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿಯವರನ್ನು ಹೊರತುಪಡಿಸಿ ಉಳಿದವರು  3 ತಲೆಮಾರಿನ ದಾಖಲೆ ,ಇಬ್ಬರ ಸಾಕ್ಷಿಯನ್ನು  ನೀಡಬೇಕಾಗಿದೆ ಇದು ಕಷ್ಟದ ಕೆಲಸ ಎಂದರು .

ಕಾಯ್ದೆಯನ್ನು ಸರಳ ಗೊಳಿಸಿ ಕೆಲವೊಂದು ಮಾರ್ಪಾಡು ಮಾಡಿ 5ಎಕರೆ ವರೆಗಿನ ಒತ್ತುವರಿಯನ್ನು  ಸಕ್ರಮಗೊಳಿಸುವುದು ಸೂಕ್ತವೆಂದು ಅಭಿಪ್ರಾಯಿಸಿದರು .   

 ಸಂಸತ್ ಸದಸ್ಯ ರಾಘವೇಂದ್ರ ಅವರ ಜೂತೆ ಮಾತನಾಡಿದ್ದು , ಸಂಸತ್ತಿನಲ್ಲಿ ಚರ್ಚಿಸಿ ಕಾಯ್ದೆ ಜಾರಿಗೊಳಿಸಬೇಕು ಎಂದರು .