udayanews

ಗುರುವಾರ, ಫೆಬ್ರವರಿ 25, 2021

ಅಕ್ರಮ ಭೂ ಮಂಜೂರಾತಿ :ಮೂವರ ಅಮಾನತು


 ಚಿಕ್ಕಮಗಳೂರು :ಜಿಲ್ಲೆಯ ಕಡೂರು ತಾಲ್ಲೂಕು ಕಚೇರಿಯಲ್ಲಿ ನಡೆದಿರುವ ಭೂ ಅಕ್ರಮ ಮಂಜೂರಾತಿ ಹಗರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಕೆ .ಎನ್ ರಮೇಶ್ ಆದೇಶ ಹೊರಡಿಸಿದ್ದಾರೆ .

ಕಡೂರು ತಾಲ್ಲೂಕು ಕಚೇರಿಯ ತಹಸೀಲ್ದಾರ್ ವರ್ಗಾವಣೆಗೊಂಡಿದ್ದರು ಅವರ ಹೆಸರಿನಲ್ಲಿ ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ ಭೂಮಿ ಮಂಜೂರು ಮಾಡಿದ 64 ಪ್ರಕರಣಗಳು ಬೆಳಕಿಗೆ ಬಂದಿದ್ದು ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ಬಗಾದಿ ಗೌತಮ್ ತನಿಖೆಗೆ ಆದೇಶಿಸಿದ್ದರು.

ತನಿಖಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಎಚ್ ಎಲ್ ನಾಗರಾಜ್ ನೇಮಕಗೊಂಡಿದ್ದು , ಅಕ್ರಮ ಎಸಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಸಖರಾಯಪಟ್ಟಣ  ಹೋಬಳಿಯ ರಾಜಸ್ವ ನಿರೀಕ್ಷಕ ಹೆಚ್ ಸಿ. ಸುರೇಶ್  ,ಪಂಚನಹಳ್ಳಿಯ ಬಿ. ಎನ್ .ಚಂದ್ರಶೇಖರ್ ಹಾಗೂ ಭೂಮಿ ಕೇಂದ್ರದ ಕೆ .ಎಸ್. ಶ್ರುತಿ ಅಮಾನತುಗೊಂಡಿದ್ದಾರೆ

ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ತಹಶೀಲ್ದಾರ್ ಉಮೇಶ್ ಹಾಗೂ ಶಿರಸ್ತೆದಾರ್ ಮೇಲೂ ಕ್ರಮಕ್ಕೆ ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿದೆ . 

ಬುಧವಾರ, ಫೆಬ್ರವರಿ 24, 2021

ಪೊಲೀಸರ ವಿರುದ್ಧ ಪಿ ಎಫ್ ಐ ಪ್ರತಿಭಟನೆ


 ಚಿಕ್ಕಮಗಳೂರು: ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತನನ್ನು ಯುಪಿ ಪೊಲೀಸರು ಅಪಹರಿಸಿದ ಕ್ರಮವನ್ನು ಖಂಡಿಸಿ ಚಿಕ್ಕಮಗಳೂರಿನಲ್ಲಿ ಪಿಎಫ್ ಐ ಕಾರ್ಯಕರ್ತರು ಪ್ರತಿಭಟನೆ ಮಾಡಿದರು . 

ಆಜಾದ್ ಮೈದಾನದಲ್ಲಿ   ಪ್ರತಿಭಟನೆ ನಡೆಸಿ ಪಿಎಫ್ಐ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹಾಕಿ ಕಿರುಕುಳ ನೀಡುವ ಕ್ರಮ ದೇಶದ ವಿವಿಧ ಕಡೆಗಳಲ್ಲಿ ಪೋಲಿಸರು ಮಾಡುತ್ತಿದ್ದು ಇದು ಖಂಡನೀಯ ಎಂದರು  .

ದೇಶದ ಯಾವುದೇ ಭಾಗದಲ್ಲಿ ಗಲಭೆಗಳು ನಡೆದಾಗ ಪಿಎಫ್ಐ ಸಂಘಟನೆಯನ್ನು ಥಳಕು ಹಾಕುವ ಪ್ರವೃತ್ತಿಯನ್ನು ಕೆಲವು ರಾಜಕೀಯ ಪಕ್ಷದ ಮುಖಂಡರು ಮಾಡುತ್ತಿದ್ದು ಇದನ್ನು ತೀವ್ರವಾಗಿ ಖಂಡಿಸುವುದಾಗಿ ಮುಖಂಡರು ಹೇಳಿದರು .

    ಪೊಲೀಸರಿಂದ ಅಪಹರಣಕ್ಕೆ ಒಳಗಾದ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು .

(ಚಿತ್ರ ತಾರನಾಥ್ ಕಾಮತ್)

ಗುಡಿಸಲು ನೆಲಸಮ ಖಂಡಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ

ಚಿಕ್ಕಮಗಳೂರು : ನಗರ ಸಭೆ ವ್ಯಾಪ್ತಿಯ ಉಪ್ಪಳ್ಳಿ ಸಮೀಪದ ಕಲ್ದೊಡ್ಡಿಯ ಇಂದಿರಾಗಾಂಧಿ ಬಡಾವಣೆಯಲ್ಲಿ ಗುಡಿಸಲುಗಳನ್ನು ನೆಲಸಮ ಮಾಡಿ ಮುನ್ನೂರು ಕುಟುಂಬಗಳನ್ನು ಬೀದಿ ಪಾಲು ಮಾಡಿದ ಕ್ರಮ ಖಂಡಿಸಿ ಇಲ್ಲಿನ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಯಿತು . 

ಗುಡಿಸಲು ದ್ವಂಸಮಾಡಿ ಭೂಮಿ ವಸತಿ ವಂಚಿತ ಬಡವರನ್ನು ಬೀದಿಪಾಲು ಮಾಡಿರುವುದನ್ನು ಖಂಡಿಸಿ, ಎಲ್ಲರಿಗೂ ಕೂಡಲೇ ನಿವೇಶನ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಜಾತ್ಯತೀತ ಜನತಾದಳದ ಎಚ್ ಎಚ್ ದೇವರಾಜ್ , ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಕೆ ಎಲ್ ಅಶೋಕ್ ನಿಲಗುಳಿ ಪದ್ಮನಾಭ ಇತರರು ನೇತೃತ್ವ ವಹಿಸಿದ್ದರು .


ಮಂಗಳವಾರ, ಫೆಬ್ರವರಿ 23, 2021

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಎಫ್ ಡಿ ಪ್ರಕರಣ ಪತ್ತೆ


 ಚಿಕ್ಕಮಗಳೂರು :ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನಲ್ಲಿ ಮಂಗನ ಕಾಯಿಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ .

ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮನೆಯಲ್ಲಿ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿದೆ .

ತೀರ್ಥಹಳ್ಳಿಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವ್ಯಕ್ತಿಯಲ್ಲಿ ಜ್ವರ ಕಾಣಿಸಿಕೊಂಡಿತು. ಪರೀಕ್ಷೆ ಮಾಡಿ ರಕ್ತದ ಮಾದರಿಯನ್ನು ತೀರ್ಥಹಳ್ಳಿ ಆಸ್ಪತ್ರೆಗೆ ಕಳಿಸಿದಾಗ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ .

ವ್ಯಕ್ತಿಯನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ . ಮಂಗನ ಕಾಯಿಲೆ ಕಾಣಿಸಿಕೊಂಡ ಹಿನ್ನಲೆಯಲ್ಲಿ  ಕೆರೋಡಿ, ಬೆಮ್ಮನೆ ,ಕಾರೆಹೂಳಲು ಸೇರಿದಂತೆ 6 ಗ್ರಾಮಗಳಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ .

ರೈತ ಹೋರಾಟ :ದೆಹಲಿಯಲ್ಲಿ ಕನ್ನಡದ ಕಹಳೆ



     ಚಿಕ್ಕಮಗಳೂರು :ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಚಳವಳಿಗೆ ಕರ್ನಾಟಕದ ರೈತರು ಬೆಂಬಲ ವ್ಯಕ್ತಪಡಿಸಿದ್ದಾರೆ .

ಕಳೆದ 1ತಿಂಗಳಿನಿಂದ ರಾಜ್ಯದ ವಿವಿಧ ಭಾಗಗಳಿಂದ ರೈತರು ತಂಡೋಪತಂಡವಾಗಿ ದೆಹಲಿಗೆ ತೆರಳಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಚಳವಳಿಗೆ ಅಳಿಲು ಸೇವೆ ಸಲ್ಲಿಸಿದ್ದಾರೆ .

ಕರ್ನಾಟಕ ಜನಶಕ್ತಿ ತಂಡದ ಸಿರಿಮನೆ ನಾಗರಾಜ್,  ವಾಸು ,ಮಲ್ಲಿಗೆ ಇತರೆ  ಗೆಳೆಯರು ಈಗಾಗಲೇ ದೆಹಲಿಗೆ ತೆರಳಿದ್ದು , ಹೋರಾಟ ನಡೆಸುತ್ತಿರುವ ರೈತರನ್ನು ಭೇಟಿಯಾಗಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ .

ಚಿಕ್ಕಮಗಳೂರಿನಿಂದ ಕಳಸದ ವಾಸು ,ರಾಮುಕೌಳಿ, ಹಾಗಲಗಂಚಿ ವೆಂಕಟೇಶ್ ಸೇರಿದಂತೆ ಅನೇಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ . 

ಸೋಮವಾರ, ಫೆಬ್ರವರಿ 22, 2021

ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ


 ಚಿಕ್ಕಮಗಳೂರು :ಜಿಲ್ಲಾಧಿಕಾರಿಯಾಗಿ ಕೆ. ಎನ್ .ರಮೇಶ್ ಅಧಿಕಾರ ಸ್ವೀಕರಿಸಿದರು .

ಕಂದಾಯ ಇಲಾಖೆ ನೌಕರರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಶುಭ ಹಾರೈಸಿದರು .

ಈ ಹಿಂದೆ ಇವರು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾಗಿದ್ದರು 

ಭಾನುವಾರ, ಫೆಬ್ರವರಿ 21, 2021

ರೈತರಿಗೆ ಮಣ್ಣು ತಿನ್ನಿಸಿದ ಗುತ್ತಿಗೆದಾರ !!


 ಚಿಕ್ಕಮಗಳೂರು ಕಡೂರು ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ರೈತರಿಗೆ ವಂಚಿಸಿದ್ದಾರೆ ಎಂದು ಹಿರೇಗೌಜ ಗ್ರಾಮಸ್ಥರು  ಆರೋಪಿಸಿದ್ದಾರೆ.

ರಸ್ತೆ ಕಾಮಗಾರಿ ವೇಳೆ ಹಿರೇಗೌಜ ಗ್ರಾಮದ ಕೆಲವು ರೈತರ ಜಮೀನಿನಿಂದ  ಉಚಿತವಾಗಿ ಗ್ರಾವೆಲ್  ಮಣ್ಣು ತೆಗೆದಿದ್ದು ಬದಲಿಗೆ ಗೋಡು ಮಣ್ಣು ಹಾಕಿಸಿಕೊಡುವುದಾಗಿ ನೂರಾರು ಲೋಡ್ ಮಣ್ಣು ತೆಗೆದಿದ್ದಾರೆ ಎಂದು ಹೇಳಿದ್ದಾರೆ 

ಇದುವರೆಗೂ ರೈತರ ಜಮೀನಿಗೆ ಬದಲಿ ಮಣ್ಣು ಹಾಕಿಸಿಲ್ಲ. ಇದರಿಂದಾಗಿ ರೈತರು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರನಿಗೆ ಕರೆ ಮಾಡಿದರು ಸರಿಯಾದ ಉತ್ತರ ಸಿಗುತ್ತಿಲ್ಲ ಎಂದು ದೂರಿದ್ದಾರೆ . 

ಸಣ್ಣ ನಿಲ್ದಾಣ :ಹಿರೇಗೌಜ ಗ್ರಾಮದ ಮುಖ್ಯ ರಸ್ತೆಯಲ್ಲಿ ‌  50 ಜನ ನಿಲ್ಲುವಂತಹ ನಿಲ್ದಾಣ ತೆರವು ಮಾಡಿ ಬದಲಿಗೆ ಇದೀಗ  ಶೆಡ್ ಮಾದರಿಯಲ್ಲಿ ಸಣ್ಣದಾದ ನಿಲ್ದಾಣ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ 1ವಾರದಲ್ಲಿ ಸಮಸ್ಯೆ ಬಗೆಹರಿಸುವಂತೆ ಗಡುವು ನೀಡಿದ್ದಾರೆ .