udayanews

ಶುಕ್ರವಾರ, ಮಾರ್ಚ್ 19, 2021

ವಿದ್ಯುತ್ ಅವಘಡ: ಸುಟ್ಟು ಕರಕಲಾದ ಮನೆ


 ಚಿಕ್ಕಮಗಳೂರು :ಬದುಕಿನ ನಿರ್ವಹಣೆಗೆ ಸಣ್ಣ ಹೋಟೆಲ್ಲನ್ನು ಇಟ್ಟುಕೊಂಡಿದ್ದ  ಜಯನಗರದ ರೂಪಾ ಅವರ ಮನೆಗೆ ಇಂದು ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿದೆ .

ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಈ ಬೆಂಕಿ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ .ಕ್ಷಣಮಾತ್ರದಲ್ಲಿ ಬೆಂಕಿ ಮನೆಯನ್ನು ಆವರಿಸಿತು. ಅಕ್ಕಪಕ್ಕದವರು ಬೆಂಕಿ ನಂದಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ .

ಇತರ ಮನೆಗಳಿಗೂ ಬೆಂಕಿ ಹರಡುವ ಸಾಧ್ಯತೆಗಳಿದ್ದವು , ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಬಹಳಷ್ಟು ವಸ್ತುಗಳು ಸುಟ್ಟು ಕರಕಲಾಗಿ ಹೋಗಿ ಭಾರಿ ನಷ್ಟ ಸಂಭವಿಸಿದೆ .

ಬುಧವಾರ, ಮಾರ್ಚ್ 17, 2021

ನಗರಸಭೆಯಲ್ಲಿ ಹಣ ದುರ್ಬಳಕೆ: ಇಬ್ಬರು ಅಂದರ್


 ಚಿಕ್ಕಮಗಳೂರು :ಇಲ್ಲಿನ ನಗರಸಭೆಯಲ್ಲಿ ಸಾರ್ವಜನಿಕರ ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ .

ನಗರಸಭೆ ಆಯುಕ್ತ ಬಸವರಾಜ್ ನೀಡಿದ ದೂರನ್ನು ಆಧರಿಸಿ ಕಂದಾಯ ಸಿಬ್ಬಂದಿ ಶ್ಯಾಮ್ ಹಾಗೂ ಬ್ರೋಕರ್ ಗುತ್ತಿಗೆದಾರ ಕೇಶವ ನನ್ನು ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ .

ಕಂದಾಯ ಬಾಕಿ ,ನೀರಿನ ತೆರಿಗೆ ಸೇರಿದಂತೆ ಸಾರ್ವಜನಿಕರು  ಕಟ್ಟಿದ್ದ ಲಕ್ಷಾಂತರ ರೂ ಗಳನ್ನು   ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪವಿದೆ .ಕೇಶವ ಶಂಕರಪುರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎನ್ನಲಾಗಿದೆ 

ಅಜ್ಜಂಪುರ :ಜಾತಿನಿಂದನೆ- ಲೈಂಗಿಕ ದೌರ್ಜನ್ಯ ಯತ್ನ :ಐವರು ಅಂದರ್


 ಚಿಕ್ಕಮಗಳೂರು :ಪತ್ನಿಯೊಂದಿಗೆ ಜಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಯುವಕರ ಗುಂಪೊಂದು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಅಜ್ಜಂಪುರ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಈ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಅಕ್ಷಯ್ ಹಾಕೆ   ಮಂಜಾನಾಯ್ಕ ತನ್ನ ಪತ್ನಿಯೊಂದಿಗೆ ಅಂತರಗಟ್ಟೆ ದುರ್ಗಾಂಬ ಜಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ .

6 ಜನ ಯುವಕರ ಗುಂಪು ಪತ್ನಿ ಶೀಲಾ ಬಾಯಿಯ ಸೊಂಟಕ್ಕೆ ಕೈ ಹಾಕಿ ಸೀರೆ ಎಳೆದಿದ್ದು ಇದನ್ನು ಪ್ರಶ್ನಿಸಲು ತೆರಳಿದ ಮಂಜನಾಯ್ಕ್ ಮೇಲೆ ಹಲ್ಲೆಯನ್ನೂ ಮಾಡಿ ಗಾಯಗೊಳಿಸಿದ್ದಾರೆ ಎಂದು ತಿಳಿ ಸಿದ್ದಾರೆ .

ಅಜ್ಜಂಪುರ ಠಾಣೆಯಲ್ಲಿ ನೀಡಿದ ದೂರು ಆಧರಿಸಿ ಯೋಗೇಶ್, ಮನು, ಸಂತೋಷ್ ಶಶಿಕುಮಾರ್ ಹಾಗೂ ಶಿವಕುಮಾರ್ ರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ .


ಚಾರ್ಮಾಡಿ ಘಾಟಿಯಲ್ಲಿ ಬಸ್ ಸಂಚಾರಕ್ಕೆ ಅವಕಾಶ


 ಚಿಕ್ಕಮಗಳೂರು :ಭಾರಿ ಮಳೆಯಿಂದ ಕಳೆದ 2ವರ್ಷಗಳಿಂದ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದ ಚಾರ್ಮಾಡಿ ಘಾಟಿಯಲ್ಲಿ ಕೊನೆಗೂ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ .

ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೀಡಿದ ವರದಿ ಆಧರಿಸಿ ಜಿಲ್ಲಾಧಿಕಾರಿ ಕೆ.ಎನ್ . ರಮೇಶ್ ಆದೇಶ ನೀಡಿದ್ದಾರೆ .
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್, 6ಚಕ್ರದ ಲಾರಿಗಳು, ಟೆಂಪೋ ಸೇರಿದಂತೆ  ಇನ್ನಿತರೆ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ .
6 ಚಕ್ರ ಮೇಲ್ಪಟ್ಟ ವಾಹನಗಳಿಗೆ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ . ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ .
ಈ ಭಾಗದಲ್ಲಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕೊಟ್ಟಿಗೆಹಾರ , ಚಾರ್ಮಾಡಿ ಭಾಗದ ಗ್ರಾಮಸ್ಥರು ತೀವ್ರ ಒತ್ತಾಯವನ್ನು ಹೇರಿದ್ದನ್ನು  ಇಲ್ಲಿ ನೆನಪಿಸಬಹುದು .
ಜಿಲ್ಲಾಡಳಿತ ಆದೇಶದಿಂದಾಗಿ ದಕ್ಷಿಣ ಕನ್ನಡ, ಉಡುಪಿ  ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ .

ಹೊಸ ಆಶಯ ಮೂಡಿಸಿರುವ ರೈತ ಪಂಚಾಯತ್


     ಚಿಕ್ಕಮಗಳೂರು; ಇದೇ ತಿಂಗಳ ೨೦ ರಂದು  ಮಧ್ಯಾಹ್ನ  ಶಿವಮೊಗ್ಗದಲ್ಲಿ ನಡೆಯಲಿರುವ ರೈತ ಪಂಚಾಯತ್ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದೆ .

ಕಾರ್ಯಕ್ರಮದ ಯಶಸ್ವಿಗೆ ಸಂಘಟಕರು ಟೊಂಕಕಟ್ಟಿ ನಿಂತಿದ್ದು  ಪ್ರತಿ ಹಳ್ಳಿ ಹಳ್ಳಿಗಳಿಗೂ ತಲುಪಿ ಸಭೆಗಳನ್ನು ನಡೆಸುತ್ತಿದ್ದಾರೆ .

ಹೊಸ ಕೃಷಿ ಕಾಯ್ದೆಯ ಸಾಧಕ ಬಾಧಕಗಳನ್ನು ಮನವರಿಕೆ ಮಾಡಿಕೊಡುವ ಕರಪತ್ರಗಳನ್ನು ಹಂಚಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದಾರೆ .

ಐಕ್ಯ ಹೋರಾಟ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ .

ಅಂದು ನಡೆಯುವ ಕಾರ್ಯಕ್ರಮ ರೈತ ಹೋರಾಟದಲ್ಲಿ  ಹೊಸ ಭರವಸೆ - ಆಶಯ -ಹೆಜ್ಜೆ ಗುರುತನ್ನು ಮೂಡಿಸುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ .

ಹೊಸ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಚಳವಳಿ ಈಗಾಗಲೇ ೧೦೦ ದಿನಗಳನ್ನು ಪೂರೈಸಿದ್ದು 'ದಕ್ಷಿಣ ಭಾರತದಲ್ಲಿಯೂ ಹೋರಾಟವನ್ನು ತೀವ್ರಗೊಳಿಸುವ ಕಹಳೆ  ರೈತ ಪಂಚಾಯತ್ ನಲ್ಲಿ ಮೊಳಗಲಿದೆ . 


ಮಂಗಳವಾರ, ಮಾರ್ಚ್ 16, 2021

ಕೆಂಪೇಗೌಡರ ಬದಲು ಅದಾನಿಗೆ ಕೆಂಪುಹಾಸು !! !!


 ಕೆಂಪೇಗೌಡರ ಅಭಿಮಾನಿಗಳು ಈಗ ಮಾತನಾಡಬೇಕಿದೆ. ಅಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ದೇವನಹಳ್ಳಿಯಲ್ಲೇ ಹುಟ್ಟಿ ಬೆಳೆದ ಟಿಪ್ಪು ಸುಲ್ತಾನ್ ಹೆಸರು ಸೂಕ್ತ ಎಂದು ಗಿರೀಶ್ ಕಾರ್ನಾಡ್ ಅಭಿಪ್ರಾಯ ವ್ಯಕ್ತಪಡಿಸಿದಾಗ ಗದ್ದಲ ಎಬ್ಬಿಸಿದವರೆಲ್ಲರೂ ಈಗ ಮಾತನಾಡಬೇಕಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಕೆಲವೇ ದಿನಗಳಲ್ಲಿ ಕೆಂಪೇಗೌಡ ಏರ್ ಪೋರ್ಟ್ ಎಂಬ ಬೋರ್ಡಿನ ಪಕ್ಕದಲ್ಲೇ ಅದಾನಿ ಏರ್ ಪೋರ್ಟ್ ಎಂಬ ಬೋರ್ಡ್ ಕಾಣಿಸಿಕೊಳ್ಳಲಿದೆ. ಇದು ಕೆಂಪೇಗೌಡರಿಗೆ ಮಾತ್ರವಲ್ಲದೆ ಇಡೀ ಕನ್ನಡಿಗರಿಗೆ ಮಾಡುವ ಅವಮಾನವಾಗಿದೆ.

ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳಲ್ಲಿನ ತನ್ನ ಉಳಿಕೆ ಪಾಲಿನ ಷೇರನ್ನೂ ಮಾರಾಟ ಮಾಡಲು ಕೇಂದ್ರ ಸರ್ಕಾರ ಸಿದ್ದತೆ ಮಾಡಿಕೊಂಡಿದೆ. 2021-22ರ ಹಣಕಾಸು ವರ್ಷದಲ್ಲಿ ಆಸ್ತಿಗಳ ನಗದೀಕರಣದ ಮೂಲಕ 2.5 ಲಕ್ಷ ಕೋಟಿ ರೂ. ಸಂಗ್ರಹಣೆ ಸಂಬಂಧ ತನ್ನ ಪಾಲನ್ನು ಮಾರಾಟ ಮಾಡಲು  ಸಿದ್ಧತೆ ನಡೆಸಿದೆ. ಹಾಗೇನಾದರೂ ಆದರೆ ಮಂಗಳೂರು ಏರ್ ಪೋರ್ಟ್ ನಂತೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ಏರ್ ಪೋರ್ಟ್ ಕೂಡಾ ಅದಾನಿ (ಅದಾನಿಯೇ ಷೇರು ಖರೀದಿಸಿದರೆ) ಏರ್ ಪೋರ್ಟ್ ಆಗಲಿದೆ.

ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ(ಎಎಐ) ಷೇರು ಹಿಂತೆಗೆತ ಸಂಬಂಧ ವಿಮಾನಯಾನ ಸಚಿವಾಲಯ ಅನುಮೋದನೆ ನೀಡಲಿದ್ದು, ಈ ವಿಷಯವು ಕೇಂದ್ರದ ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸರ್ಕಾರ ಶೇ.13 ಹಾಗೂ ದೆಹಲಿಯ ವಿಮಾನ ನಿಲ್ದಾಣದಲ್ಲಿ ಶೇ.26ರಷ್ಟು ಷೇರನ್ನು ಹೊಂದಿದೆ. ವಿಮಾನ ನಿಲ್ದಾಣಗಳ ಖಾಸಗೀಕರಣ ಪ್ರಕ್ರಿಯೆಗಳನ್ನು ಈಗಾಗಲೇ ಸಚಿವಾಲಯ ಆರಂಭಿಸಿದ್ದು, ಸಂಪುಟದ ಅಂಗೀಕಾರ, ವಿವಿಧ ಇಲಾಖೆಗಳ ಅನುಮೋದನೆ ಪಡೆಯುವ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ.

ಕೆಂಪೇಗೌಡರು ಕೇವಲ ಯಾವುದೋ ಒಂದು ಜಾತಿಗೆ ಸೀಮಿತರಾದವರಲ್ಲ. ಕೆಂಪೇಗೌಡ ಎಂದರೆ ಕನ್ನಡಿಗರ ಅಸ್ಮಿತೆಯ ಪ್ರಶ್ನೆ. ಬಹುಶಃ ನಾನು ಕೆಂಪೇಗೌಡರ ಅಭಿಮಾನಿ ಅಲ್ಲ ಎನ್ನುವ ಕನ್ನಡಿಗ ಕರ್ನಾಟಕದಲ್ಲಿ ಇರಲಿಕ್ಕಿಲ್ಲ. ಈಗ ಕೆಂಪೇಗೌಡ ಅಭಿಮಾನಿಗಳೆಲ್ಲರೂ ಬೆಂಗಳೂರು ವಿಮಾನ ನಿಲ್ದಾಣ ಖಾಸಗೀಕರಣದ ವಿರುದ್ದ ಹೋರಾಟ ಮಾಡಬೇಕಿದೆ. 

ಖಾಸಗೀಕರಣವಾದರೂ ಕೆಂಪೇಗೌಡರ ಹೆಸರು ಹಾಗೇ ಉಳಿಯುತ್ತೆ, ಬೋರ್ಡ್ ಬದಲಾಯಿಸುವುದಿಲ್ಲ ಎಂಬಂತ ಹೇಳಿಕೆಗಳನ್ನು ಸರ್ಕಾರ ನೀಡಬಹುದು. ಕೇಂದ್ರ ಸರ್ಕಾರದ ಷೇರು ಇಲ್ಲವೆಂದ ಮೇಲೆ, ಸಂಪೂರ್ಣ ಮಾರಾಟ  ಮಾಡಿದ ಮೇಲೆ ಅದು ಖಾಸಗಿಯಷ್ಟೆ. ಇಂದಲ್ಲ ನಾಳೆ ಕೆಂಪೇಗೌಡರ ಹೆಸರನ್ನು ಅಳಿಸಿ ಹಾಕುವುದಂತೂ ನಿಜ. ಜನರ ವಿರೋಧಕ್ಕೆ ಹೆದರಿ ಈಗ ಕೆಂಪೇಗೌಡ ಏರ್ ಪೋರ್ಟ್ ಎಂಬ ಬೋರ್ಡಿನ ಪಕ್ಕದಲ್ಲೇ ಅದಾನಿ ಏರ್ ಪೋರ್ಟ್ ಎಂಬ ಸಣ್ಣ ಬೋರ್ಡ್ ಹಾಕಬಹುದು. ಕಾಲಕ್ರಮೇಣ ಕೆಂಪೇಗೌಡ ಹೆಸರಿನ ಬೋರ್ಡ್ ಅನ್ನು ಕಿತ್ತು ಹಾಕುವುದಂತೂ ಸ್ಪಷ್ಟ. ಹಾಗಾಗಿ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗಿಕರಣವನ್ನೇ ಕನ್ನಡಿಗರು ವಿರೋಧಿಸಬೇಕಿದೆ.


- ನವೀನ್ ಸೂರಿಂಜೆ

ಮೀಸಲು ಅರಣ್ಯ ವಿರೋಧಿಸಿ ಮತ್ತೆ ಚುನಾವಣೆ ಬಹಿಷ್ಕಾರ :ಸರಣಿ ಸಭೆ


 ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿಗೆ ಕಂಟಕಪ್ರಾಯವಾಗಿರುವ ಹುಲಿಯೋಜನೆ, ಮೀಸಲು ಅರಣ್ಯ ,ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಬಹಿಷ್ಕಾರಕ್ಕೆ ಸಿದ್ಧತೆ ನಡೆದಿದೆ .

ಯೋಜನೆ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯ್ತಿಗಳಿಗೆ ಈ ಹಿಂದೆ ನಡೆದ ಚುನಾವಣೆಯನ್ನು ಜನ ಬಹಿಷ್ಕರಿಸಿದ್ದರು.

ಮತ್ತೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ನಾಮಪತ್ರ ಸಲ್ಲಿಸದಂತೆ ಸರಣಿ ಸಭೆಗಳು ನಡೆಯುತ್ತಿವೆ . ಬಹುತೇಕ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳು ಕಡಿಮೆ ಇವೆ .

ಕಳೆದ 1ವಾರದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಣಿ ಸಭೆಗಳನ್ನು ನಡೆಸಿ ಚುನಾವಣೆಯನ್ನು ಬಹಿಷ್ಕರಿಸುವಂತೆ ಜನ ನಿರ್ಧರಿಸಿದ್ದಾರೆ .

ಒಂದೆರಡು ಕಡೆ ನಾಮಪತ್ರ ಸಲ್ಲಿಕೆ ಆಗಿದ್ದರೂ ಅದನ್ನು ಹಿಂದೆ ತೆಗೆಸುವ ವಿಶ್ವಾಸವನ್ನು ಜನ ಹೊಂದಿದ್ದಾರೆ .

ಮುಳ್ಳಯ್ಯನಗಿರಿ ಮೀಸಲು ಅರಣ್ಯ ಘೋಷಣೆ ಪ್ರಸ್ತಾವನೆ ಸರ್ಕಾರದ ಮುಂದೆ ಇದ್ದು ಯಾವುದೇ ಕ್ಷಣದಲ್ಲಿ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಗಳು ಇವೆ .