udayanews

ಸೋಮವಾರ, ಮಾರ್ಚ್ 29, 2021

ಅತ್ಯಾಚಾರ ಆರೋಪ :ರಮೇಶ್ ಜಾರಕಿಹೊಳಿ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪಂಜಿನ ಮೆರವಣಿಗೆ


 ಚಿಕ್ಕಮಗಳೂರು :ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಒತ್ತಾಯಿಸಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು .

ತಾಲ್ಲೂಕು ಕಚೇರಿ ಆವರಣದಿಂದ ಹನುಮಂತಪ್ಪ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು .

ಮಾಜಿ ಸಚಿವರ ವಿರುದ್ಧ ಅತ್ಯಾಚಾರ ಆರೋಪ  ಪ್ರಕರಣ ದಾಖಲಾಗಿದ್ದರೂ ಈವರೆಗೂ ಅವರನ್ನು ಬಂಧಿಸದೆ ರಕ್ಷಿಸುವ ಯತ್ನ ನಡೆದಿದೆ ಎಂದು ಆರೋಪಿಸಿದರು 

ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡ ಬದಲು ಆಕೆಯನ್ನು ಆರೋಪಿಯಂತೆ ಬಿಂಬಿಸಲಾಗುತ್ತಿದೆ . ಆರೋಪಿ ಸ್ಥಾನದಲ್ಲಿ ಇರುವವರನ್ನು ತಿರುಗಾಡಲು ಬಿಡಲಾಗಿದೆ ಎಂದು ದೂರಿದರು .ಇದರಿಂದ ಸಾಕ್ಷ್ಯಗಳು ನಾಶವಾಗುವ ಅಪಾಯವಿದೆ ಎಂದು ಎಚ್ಚರಿಸಿದರು .

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆದಿದೆ .ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದು ಸಮಗ್ರ ತನಿಖೆಗೆ ಒತ್ತಾಯಿಸಿದರು .


ಕ್ಷೇತ್ರ ಪುನರ್ ವಿಂಗಡನೆ ಪ್ರಸ್ತಾಪ :ವೈಎಸ್ವಿದತ್ತ ತೀವ್ರ ಆಕ್ಷೇಪ


 ಚಿಕ್ಕಮಗಳೂರು: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆ ಪ್ರಸ್ತಾವನೆಗೆ ಮಾಜಿ ಶಾಸಕ ವೈಎಸ್ ವಿ ದತ್ತಾ ತೀರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ .

ಸುದ್ದಿಗಾರರ ಜೊತೆ ಮಾತನಾಡಿದ ಅವರು ಮುಂದಿನ ಹತ್ತು ವರ್ಷಗಳ ಅವಧಿಗೆಮೀಸಲಾತಿ ನಿಗದಿಪಡಿಸಿ   ಚುನಾವಣಾ ಆಯೋಗ ಈ ಹಿಂದೆ ನಿರ್ಧಾರ ಮಾಡಿತ್ತು ಎಂದರು .

ಸರ್ಕಾರ ಮತ್ತೆ ಈಗ 5ವರ್ಷಗಳಿಗೆ ಸೀಮಿತಗೊಳಿಸಿ ಕ್ಷೇತ್ರಗಳ ಮರು ವಿಂಗಡಣೆಗೆ ಕರಡು ಪ್ರಸ್ತಾವನೆಯನ್ನು ಚುನಾವಣೆ ಆಯೋಗಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದ್ದು ಇದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪಿಸಿದರು .

ಸರ್ಕಾರದ ಹಸ್ತಕ್ಷೇಪ ಸರಿಯಲ್ಲ ಎಂದಿರುವ ದತ್ತ ಸರ್ಕಾರದ ಕೈಗೊಂಬೆಯಾಗದೆ  ಚುನಾವಣಾ ಆಯೋಗ ಈ ವಿಷಯದಲ್ಲಿ ಖಡಕ್ ನಿರ್ಧಾರ ಮಾಡಬೇಕಿತ್ತು   ಎಂದಿರುವ ಅವರು ಕಾನೂನಾತ್ಮಕ ಹೋರಾಟ ಅನಿವಾರ್ಯ ಎಂದರು . 

ಛಾಯಾ ಗ್ರಾಹಕರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿ :ರಂಭಾಪುರಿ ಶ್ರೀಗಳು


    ಚಿಕ್ಕಮಗಳೂರು :ದಿನನಿತ್ಯದ ಸುದ್ದಿ ಇನ್ನಿತರ ಚಟುವಟಿಕೆ ಸಭೆ' ಸಮಾರಂಭಗಳಲ್ಲಿ ಭಾಗವಹಿಸಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಕಾರ್ಯನಿರ್ವಹಿಸುವ ಛಾಯಾಗ್ರಾಹಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕೆಂದು ರಂಭಾಪುರಿ ಶ್ರೀಗಳು ಅಭಿಪ್ರಾಯಿಸಿದ್ದಾರೆ . ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಛಾಯಾಗ್ರಾಹಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯ ಜನಪ್ರತಿನಿಧಿಗಳು ಇವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನಿಸಬೇಕೆಂದು ಹೇಳಿದರು .

ಸಂಘದ ಅಧ್ಯಕ್ಷ ಬಿ. ಕೆ. ಜಯಚಂದ್ರ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್, ಮಾಜಿ ಅಧ್ಯಕ್ಷ ಜೀವನ್ ಶೆಟ್ಟಿ ಇತರರು ಭಾಗವಹಿಸಿದ್ದರು  .

ಮಾಜಿ ಸಚಿವ ಜಾರಕಿಹೊಳಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹ


 ಚಿಕ್ಕಮಗಳೂರು :ಅತ್ಯಾಚಾರ ಆರೋಪ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸಿಲುಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಂಧಿಸುವಂತೆ ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ .

 ಈ ವಿಷಯವನ್ನು ಗಂಭೀರವಾಗಿ ಚರ್ಚಿಸಿದ ಪಕ್ಷದ ಕಾರ್ಯಕಾರಿಣಿ ಸಭೆ , ಪ್ರಕರಣವನ್ನು ದಿಕ್ಕು ತಪ್ಪಿಸುವ ಯತ್ನ ನಡೆದಿದ್ದು  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರನ್ನು ಉದ್ದೇಶಪೂರ್ವಕವಾಗಿ ಎಳೆದು ತಂದಿರುವುದನ್ನು ಖಂಡಿಸಿತು .

ಬೆಳಗಾವಿಯಲ್ಲಿ ಡಿ .ಕೆ .ಶಿವಕುಮಾರ್ ಮೇಲೆ ಹಲ್ಲೆ ನಡೆಸಲು ಯತ್ನಿಸಿರುವುದನ್ನು ಪಕ್ಷ ಖಂಡಿಸಿತಲ್ಲದೆ  ರಮೇಶ್ ಜಾರಕಿಹೊಳಿ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಸಭೆ ನಿರ್ಧರಿಸಿತು .

ಪಕ್ಷದ ಜಿಲ್ಲಾ ಅಧ್ಯಕ್ಷ ಅಂಶುಮಂತ್, ಮಾಜಿ ಶಾಸಕರಾದ ಬಿ ಎಲ್ ಶಂಕರ್,ಮೋಟಮ್ಮ , ಗಾಯತ್ರಿಶಾಂತೇಗೌಡ ,ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು .


ಶನಿವಾರ, ಮಾರ್ಚ್ 27, 2021

ಉರುಳಿಗೆ ಸಿಲುಕಿ ಚಿರತೆ ಸಾವು


 

ಚಿಕ್ಕಮಗಳೂರು :ದುಷ್ಕರ್ಮಿಗಳು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಪ್ರಾಣಬಿಟ್ಟಿದೆ .

ಚಿಕ್ಕಮಗಳೂರು ಅರಣ್ಯ ವಿಭಾಗದ  ಕೆ .ಆರ್ .ಪೇಟೆ ಸಮೀಪದ  ಕೆಳಗಣೆ ಗ್ರಾಮದ ಅಂಬಿಕಾ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದೆ .

 ಉರುಳಿಗೆ ಸಿಲುಕಿದ್ದ ಚಿರತೆ  ಜೀವಂತವಾಗಿ ಒದ್ದಾಡುತ್ತಿದ್ದು , ಶಿವಮೊಗ್ಗ ದಿಂದ ಅಗತ್ಯ ಔಷಧ ಬರುವುದು ತಡವಾದ ಹಿನ್ನೆಲೆಯಲ್ಲಿ  ಚಿರತೆಯ ಹೊಟ್ಟೆ ಭಾಗ ಸೀಳಿ  ಹೋದ ಕಾರಣ ಅತೀವ ನೋವಿನಿಂದ ಪ್ರಾಣಬಿಟ್ಟಿದೆ. 

ಚಿರತೆಯ ಮರಣೋತ್ತರ ಪರೀಕ್ಷೆಯನ್ನು ಮತ್ತಾವರ ಅರಣ್ಯದಲ್ಲಿ ಕೈಗೊಂಡು ನಂತರ ಸುಡಲಾಯಿತು.

 ಅರಣ್ಯ ಇಲಾಖೆಯ ಅಧಿಕಾರಿ'  ಸಿಬ್ಬಂದಿ ಸ್ಥಳದಲ್ಲಿ ಇದ್ದರು. ಅಂಬಿಕಾ ಎಸ್ಟೇಟ್ ನ ಮಾಲೀಕರ ಮೇಲೆ ಪ್ರಕರಣ  ದಾಖಲಿಸಲಾಗಿದೆ.

ಕರ್ತವ್ಯಲೋಪ :ಎಎಸ್ ಐ ಸೇರಿ ಮೂವರ ಅಮಾನತು


 ಚಿಕ್ಕಮಗಳೂರು: ಕರ್ತವ್ಯಲೋಪದ ಆರೋಪದ ಮೇಲೆ ಸಹಾಯಕ ಠಾಣಾಧಿಕಾರಿ ಸೇರಿದಂತೆ ಮೂವರನ್ನು ಅಮಾನತುಗೊಳಿಸಿ ಜಿಲ್ಲಾ ರಕ್ಷಣಾಧಿಕಾರಿಗಳ ಆದೇಶಿಸಿದ್ದಾರೆ .

ಸಖರಾಯಪಟ್ಟಣ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಶಿವಕುಮಾರ್ ಪೊಲೀಸರಾದ ಶಿವಾಜಿ' ಶಿವು ಅಮಾನತುಗೊಂಡವರು .

ಈ ಮೂವರು ಕರ್ತವ್ಯದಲ್ಲಿ ಇದ್ದ ಸಂದರ್ಭದಲ್ಲಿ ಪೊಕ್ಸೊ ಕಾಯಿದೆಯಡಿ ಬಂಧಿತ ಆರೋಪಿ ಲಾಕಪ್ ನಿಂದ ತಪ್ಪಿಸಿಕೊಂಡಿದ್ದು, ಕರ್ತವ್ಯಲೋಪದ ಆರೋಪದ ಮೇಲೆ ಇವರನ್ನು ಅಮಾನತುಗೊಳಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ .

ಗಾಳಿಕೆರೆ: ಕುರುಡು ಭಕ್ತಿಯೂ... ಅರಣ್ಯ ಇಲಾಖೆಯೂ


 ಚಿಕ್ಕಮಗಳೂರು : ಬಾಬಾಬುಡನ್ ಗಿರಿ ಶ್ರೇಣಿಯ ಚಂದ್ರದ್ರೋಣ ಪರ್ವತದ ನೆತ್ತಿಯ ಮೇಲಿರುವ 'ಗಾಳಿಕೆರೆ' ಎಂಬ ಚೆಂದದ ಕೆರೆಯು ಕುರುಡು ಭಕ್ತರು ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯುವ ಮೊದಲು ಹೇಗಿತ್ತು ಈಗ ಹೇಗಿದೆ ನೋಡಿ .

ಅರಣ್ಯ ಇಲಾಖೆ ಎಂಥಾ ಮೂಢತ್ವದ ಕೆಲಸ ಮಾಡಿದೆಯೆಂದರೆ, ಶೋಲಾ ಹುಲ್ಲುಗಾವಲಿನ ಅತಿ ಸೂಕ್ಷ್ಮ ಪ್ರದೇಶವಾದ ಹಾಗೂ ಐದು ಸಾವಿರ ಅಡಿ ಎತ್ತರದ ಪ್ರದೇಶದಲ್ಲಿನ ಅಮೂಲ್ಯ ಜಲಮೂಲವನ್ನು ರಕ್ಷಿಸುವ ಸಲುವಾಗಿ ಭಕ್ತರನ್ನು, ಪ್ರವಾಸಿಗರನ್ನು ಹಾಗೂ ಪ್ರಾಣಿಬಲಿಯನ್ನು ನಿರ್ಬಂಧಿಸುವ ಬದಲು ಕೆರೆಗೆ ಕಬ್ಬಿಣದ ಬೇಲಿಯನ್ನು ಅಳವಡಿಸುವ ಮೂಲಕ ಪ್ರಾಣಿಗಳು ನೀರು ಕುಡಿಯಲು ಬರದಂತೆ ನಿರ್ಬಂಧಿಸಿದೆ.! 

ಅಸಲಿಗೆ ಜನರು ಕೆರೆಗೆ ಇಳಿಯದಂತೆ ನಿರ್ಬಂಧಿಸುವ ಸಲುವಾಗಿ ಬೇಲಿ ನಿರ್ಮಿಸಿರುವುದಾದರೂ, ಎರಡು ಮೂರು ಗೇಟು ಅಳವಡಿಸಿರುವುದರಿಂದ ಜನ ಎಂದಿನಂತೆ ಸಲೀಸಾಗಿ ಕೆರೆಯೊಳಗೆ ಇಳಿದು ಎಗ್ಗಿಲ್ಲದೆ ಮಲಿನಗೊಳಿಸುತ್ತಿದ್ದಾರೆ. ಈ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಮಿಶ್ರಿತ ಹೊಲಸು ನೀರನ್ನು  ಕುಡಿಯುವ ಪ್ರಾಣಿಗಳ ಗತಿಯೇನಾಗುತ್ತಿರಬಹುದು ಎಂಬ ಊಹೆಯೂ ಇಲಾಖೆಗಿದ್ದಂತಿಲ್ಲ.! 

 ಅನಾಹುತಕಾರಿ ಸಂಗತಿಯೆಂದರೆ, ಇಲ್ಲಿಂದ ಹಾಗೂ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ 


ಮಗ್ಗುಲಿಗಿರುವ ಚಿಕ್ಕ ತೊರೆಯಿಂದ ಹೊರಹೋಗುವ ನೀರು ಇನ್ನೊಂದಷ್ಟು ಹಳ್ಳಗಳನ್ನು‌ ಸೇರಿಕೊಂಡು ಭದ್ರಾ ಮೀಸಲು ಅರಣ್ಯದೊಳಗೆ ಹರಿಯುತ್ತದೆ. ಕಾಡಿನ ಕಡೆಗೆ ಹರಿಯುತ್ತಿರುವ ಈ ತ್ಯಾಜ್ಯಮಿಶ್ರಿತ ನೀರು ಜೈವಿಕ ವ್ಯವಸ್ಥೆಯನ್ನು ಹೇಗೆ ನಿರಂತರವಾಗಿ ಕೊಲ್ಲುತ್ತಿರಬಹುದು ಎಂಬುದನ್ನು ಅರಣ್ಯ ಇಲಾಖೆ ಮನಗಂಡಿದೆಯಾ...!?  ಎಚ್ಚೆತ್ತುಕೊಳ್ಳಲು ಇದು ಸಕಾಲ. 


*ಕಾರ್ತಿಕಾದಿತ್ಯ ಬೆಳ್ಗೋಡು*