udayanews

ಗುರುವಾರ, ಅಕ್ಟೋಬರ್ 20, 2022

ಅ 24 ರಿಂದ ಬಿಂಡಿಗ ದೇವೀರಮ್ಮನವರ ದೀಪೋತ್ಸವ; ಭಾರಿ ಪ್ರಮಾಣದ ಭಕ್ತರ ನಿರೀಕ್ಷೆ

 ಚಿಕ್ಕಮಗಳೂರು,:  ತಾಲ್ಲೂಕಿನ ಬಿಂಡಿಗ ಮಲ್ಲೇನಹಳ್ಳಿಯ  ದೇವೀರಮ್ಮ ದೇವಸ್ಥಾನದಲ್ಲಿ ಬಿಂಡಿಗ ಆದಿಶಕ್ತ್ಯಾತ್ಮಕ ಶ್ರೀ ದೇವೀರಮ್ಮನವರ ದೀಪೋತ್ಸವವು ಅಕ್ಟೋಬರ್ ೨೪ರಿಂದ ೨೭ರವರೆಗೆ ನಡೆಯಲಿದೆ. 

ಕೊರೋನ ಹಿನ್ನೆಲೆಯಲ್ಲಿ  ಕಳೆದ 2 ವರ್ಷಗಳಿಂದ ಕಳೆಗುಂದಿದ್ದ ದೇವಿರಮ್ಮ ಉತ್ಸವ ಈ ಬಾರಿ ಕಳೆಗಟ್ಟಲಿದೆ .ರಾಜ್ಯದ ವಿವಿಧ ಭಾಗಗಳಿಂದ ಬೆಟ್ಟವೇರಲು ಭಾರೀ ಸಂಖ್ಯೆಯಲ್ಲಿ ಜನ ಬರುವ ನಿರೀಕ್ಷೆಯಿದ್ದು ,ಪ್ರತಿಕೂಲ ಹವಾಮಾನ ಉತ್ಸಾಹಕ್ಕೆ ತಣ್ಣೀರು ಎರಚುವ ಸಾಧ್ಯತೆಯೂ ಇದೆ .   

ಅ.೨೪ರಂದು ಬೆಳಿಗ್ಗೆ ಶ್ರೀ ದೇವೀರಮ್ಮನ ಬೆಟ್ಟದಲ್ಲಿ ಅಭಿಷೇಕ ನಂತರ ಪೂಜೆ ಪ್ರಾರಂಭವಾಗಲಿದ್ದು, ರಾತ್ರಿ ೭ ಗಂಟೆಗೆ ದೀಪೋತ್ಸವ. ೨೫ ರಂದು ಬೆಳಿಗ್ಗೆ ಗಂಟೆ ೮.೪೫ಕ್ಕೆ ಶ್ರೀ ದೇವಿಯವರಿಗೆ ಉಡುಗೆ, ಪೂಜೆ, ಸಂಜೆ ಬೆಣ್ಣೆ ಬಟ್ಟೆ ಸುಡುವುದು ನಂತರ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. 

೨೬ರಂದು ರಾತ್ರಿ ಶ್ರೀ ಮಹಾಗಣಪತಿ ಪೂಜೆ, ಪುಣ್ಯಾಹ, ಅಗ್ನಿಕುಂಡ ಪೂಜೆ, ಕಲಶ ಸ್ಥಾಪನೆ

ಕುಂಕುಮಾರ್ಚನೆ ಇತ್ಯಾದಿ ಪೂಜೆ ನಡೆಯಲಿದೆ. ೨೭ರಂದು ಸೂರ್ಯೋದಯಕ್ಕೆ ಕೆಂಡಾರ್ಚನೆ ನಂತರ ಮಹಾಮಂಗಳಾರತಿ, ಹರಕೆ ಒಪ್ಪಿಸುವುದು, ತೀರ್ಥಪ್ರಸಾದ ವಿನಿಯೋಗ ನಡೆಯಲಿವೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ತಿಳಿಸಿದೆ.

ಚಿಕ್ಕಮಗಳೂರಿನಲ್ಲಿ ರಾಜ್ಯಮಟ್ಟದ ಯುವಜನೋತ್ಸವ


ಚಿಕ್ಕಮಗಳೂರು:  ರಾಜ್ಯಮಟ್ಟದ ಯುವಜನೋತ್ಸವನ್ನು ಚಿಕ್ಕಮಗಳೂರಿನಲ್ಲಿ  ಡಿ. ೧೬, ೧೭ ಮತ್ತು ೧೮ ಅಥವಾ ಡಿ. ೨೧, ೨೨ ಮತ್ತು ೨೩ರಂದು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.  ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ  ಮಾತನಾಡಿ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಪ್ರತಿ ಜಿಲ್ಲೆಯಿಂದ ೫೭ ಜನ ಕಲಾವಿದರಂತೆ ಒಟ್ಟು ೧೭೬೭ ಕಲಾಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದಿದ್ದಾರೆ .   

ಅಧ್ಯಕ್ಷತೆ ವಹಿಸಿದ್ದ  ಶಾಸಕ ಸಿ.ಟಿ.ರವಿ ಮಾತನಾಡಿ, ರಾಜ್ಯಮಟ್ಟದ  ಯುವಜನೋತ್ಸವವನ್ನು ಸಣ್ಣ ಕೊರತೆಯೂ ಆಗದಂತೆ ಅದ್ಧೂರಿಯಾಗಿ ಆಯೋಜಿಸಲಾಗುತ್ತದೆ. ಹವಾಮಾನ, ಮಳೆಯ ವರದಿಗಳನ್ನು ಗಮನಿಸಿಕೊಂಡು ಕಾರ್ಯಕ್ರಮದ ದಿನಾಂಕವನ್ನು ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.  

ಕರ್ನಾಟಕ ರಾಜ್ಯ ಸಫಾಯಿ ಕರ್ಮಾಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್.ಸಿ, ಉಪವಿಭಾಗಾಧಿಕಾರಿ ರಾಜೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕಿ ಡಾ. ಮಂಜುಳಾ,  ಉಪಸ್ಥಿತರಿದ್ದರು.

ಗಂಧ ಕಳ್ಳತನ ಆರೋಪ: ಬಂಧಿತ ವ್ಯಕ್ತಿ ಶೌಚಾಲಯದಲ್ಲಿ ಸಾವು- ಕೊಲೆ ಶಂಕೆ ;ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ

ಚಿಕ್ಕಮಗಳೂರು :
 ಗಂಧ ಕಳ್ಳತನದ ಆರೋಪದ ಮೇಲೆ ಬಂಧಿತ ವ್ಯಕ್ತಿಯೋರ್ವ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು ಅರಣ್ಯ ಇಲಾಖೆ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ .

ತಾಲ್ಲೂಕಿನ ಹೊಸಪೇಟೆ ಸಮೀಪದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ .ಶಿವಮೊಗ್ಗದಿಂದ ಐವರು ಗಂಧ ಕಳ್ಳತನ ಮಾಡಲು ಈ ಭಾಗಕ್ಕೆ ಬಂದಿದ್ದರು ಎನ್ನಲಾಗಿದೆ .

ಮಾಹಿತಿ ತಿಳಿದ ಅರಣ್ಯ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು ಮೂವರು ಪರಾರಿಯಾಗಿದ್ದಾರೆ .

ಬಂಧಿತರಲ್ಲಿ ರವಿ ಎಂಬಾತನ ಶವ ಆನೆ ಶಿಬಿರದ ಬಳಿಯ ಶೌಚಾಲಯದಲ್ಲಿ ಪತ್ತೆಯಾಗಿದ್ದು ಇದು ಕೊಲೆ ಎಂದು ಸಾರ್ವಜನಿಕರು ಸಂಶಯ ಹೊರಹಾಕಿದ್ದಾರೆ .

ಗಂಧ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿದ್ದು ,ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನುವ ಸಬೂಬು ಅರಣ್ಯ ಇಲಾಖೆಯದ್ದಾಗಿದೆ .

ಇಂದು ಬೆಳಿಗ್ಗೆ ಸ್ಥಳಕ್ಕೆ ಆ್ಯಂಬುಲೆನ್ಸ್  ಕರೆಸಿದ್ದು 'ವ್ಯಕ್ತಿ ಮೃತಪಟ್ಟಿರುವುದು ದೃಢವಾಗುತ್ತಿದ್ದಂತೆ ಶವ ತೆಗೆದುಕೊಂಡು ಹೋಗಲು ನಿರಾಕರಿಸಿ ಆ್ಯಂಬ್ಯುಲೆನ್ಸ್ ಹಿಂದೆ  ಬಂದಿದೆ .

ಹೊತ್ತು ಸರಿದಂತೆ ವಿಷಯ ಬಹಿರಂಗಗೊಂಡು ಸ್ಥಳದಲ್ಲಿ ಜಮಾಯಿಸಿದ ಜನ ಅರಣ್ಯ ಇಲಾಖೆ ವಿರುದ್ಧ ಕೊಲೆ ಆರೋಪವನ್ನು ಹೊರೆಸಿ ತೀವ್ರ ಆಕ್ರೋಶ ಹೊರ ಹಾಕಿದೆ.

ವ್ಯಕ್ತಿ ಸಾವಿಗೆ ಕಾರಣವಾಗಿರುವ ಓರ್ವ ಅರಣ್ಯಾಧಿಕಾರಿ ಮತ್ತು ಇಬ್ಬರು ಸಿಬ್ಬಂದಿಯನ್ನು ತಕ್ಷಣ ವಜಾ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಮಾಡಿ ಅರಣ್ಯ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ .

ಪರಿಸ್ಥಿತಿಯನ್ನು ನಿಭಾಯಿಸಲು ಅರಣ್ಯ ಮತ್ತು ಪೊಲೀಸ್ ಇಲಾಖೆ ಹರಸಾಹಸ ಪಟ್ಟಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಸಮಜಾಯಿಷಿಯನ್ನು ಒಪ್ಪದ ಜನ ಇದೊಂದು ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ .

ಬಂಧಿತ ವ್ಯಕ್ತಿಯನ್ನು ತೀವ್ರವಾಗಿ ಥಳಿಸಿದ್ದು, ಆತನ ಕೈ ಕಾಲುಗಳು ಊದಿದ್ದು ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯವೇ ವ್ಯಕ್ತಿ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ .ತಪ್ಪನ್ನು ಮುಚ್ಚಿಕೊಳ್ಳಲು ಅರಣ್ಯ ಇಲಾಖೆ ಯತ್ನಿಸುತ್ತಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ 

ಸಂಜೆ ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಜನ ಪಟ್ಟು ಹಿಡಿದಿದ್ದಾರೆ .

 ಗಂಧ ಕಳ್ಳತನ ಆರೋಪ ಹೊರೆಸಿರುವ ಅರಣ್ಯ ಇಲಾಖೆಗೆ ವಶಪಡಿಸಿ ಕೊಂಡಿರುವ ಗಂಧವನ್ನು ತೋರಿಸಲು ಸಾಧ್ಯವಾಗಿಲ್ಲ. ಮೇಲ್ನೋಟಕ್ಕೆ ಇದೊಂದು ಕೊಲೆ ಎನ್ನುವ ಶಂಕೆ ವ್ಯಕ್ತವಾಗಿದ್ದು ಮರಣೋತ್ತರ ಪರೀಕ್ಷೆಯಿಂದ ಸತ್ಯ ಹೊರ ಬರಬೇಕಾಗಿದೆ .

ಶನಿವಾರ, ಸೆಪ್ಟೆಂಬರ್ 24, 2022

ಚಿಕ್ಕಮಗಳೂರು-ಬೇಲೂರು-ಹಾಸನ ರಾಜ್ಯ ಹೆದ್ದಾರಿ ಇನ್ನು ಮುಂದೆ ರಾಷ್ಟೀಯ ಹೆದ್ದಾರಿ- ಸಿ.ಟಿ. ರವಿ

 


ಚಿಕ್ಕಮಗಳೂರು: ಇಲ್ಲಿನ ಎ.ಐ.ಟಿ. ಸರ್ಕಲ್ ರಾಷ್ಟ್ರೀಯ  ಹೆದ್ದಾರಿ ೧೭೩ ರಿಂದ ಪ್ರಾರಂಭವಾಗಿ ಬೇಲೂರು - ಹಾಸನ - ಹೊಳೆನರಸೀಪುರ - ಬಿಳಿಕೆರೆ ರಸ್ತೆಯನ್ನು ರಾಷ್ಟ್ರೀಯ  ಹೆದ್ದಾರಿಯಾಗಿ  ಮೇಲ್ದರ್ಜೆಗೇರಿಸಿ  ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. 

ಈ ಮೂಲಕ ಚಿಕ್ಕಮಗಳೂರಿನ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಈ ಹಿಂದೆ ಬೇಲೂರಿನಿಂದ ಬಿಳಿಕೆರೆ ರಸ್ತೆಯನ್ನು   ಮೇಲ್ದರ್ಜೆಗೇರಿಸುವ ಸಂದರ್ಭ ಚಿಕ್ಕಮಗಳೂರಿನಿಂದ ಬೇಲೂರಿನವರೆಗೆ ಸುಮಾರು ೨೫ ಕಿ.ಮೀ. ಕೈಬಿಟ್ಟು ಹೋಗಿತ್ತು, ಸತತ ಪ್ರಯತ್ನದ ಫಲವಾಗಿ  ಬೇಡಿಕೆ ಈಡೇರಿದಂತಾಗಿದೆ .

ರಸ್ತೆಯನ್ನು ರಾಷ್ಟ್ರೀಯ  ಹೆದ್ದಾರಿ ವಿಭಾಗಕ್ಕೆ ಹಸ್ತಾಂತರಿಸಿದ ನಂತರ  ಅಭಿವೃದ್ಧಿ ಕಾರ್ಯ ಪ್ರಾರಂಭವಾಗಲಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ. 

ಈ ರಸ್ತೆ ಅಭಿವೃದ್ಧಿಪಡಿಸುವುದರಿಂದ ಚಿಕ್ಕಮಗಳೂರಿನಿಂದ ಬೆಂಗಳೂರು ಹಾಗೂ ಮೈಸೂರಿಗೆ ಸಂಚಾರ ಇನ್ನಷ್ಟು ಸುಗಮವಾಗಲಿದೆ. 

ಜೂಜಾಟ ದಾಳಿ – 44 ಜನರ ವಶ, 5.72 ಲಕ್ಷ ನಗದು, 4 ಕಾರು - 39 ಮೊಬೈಲ್ ಫೋನ್ ಜಪ್ತಿ


 ಚಿಕ್ಕಮಗಳೂರು :ಜಿಲ್ಲೆಯಲ್ಲಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ  2 ಕಡೆ ದಾಳಿ ನಡೆಸಿದ ಪೊಲೀಸರು 44 ಜನರನ್ನು ವಶಕ್ಕೆ ಪಡೆದು 5.72 ಲಕ್ಷ ನಗದು, 4 ಕಾರು - 39 ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ .

 ಜಯಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಡಿಲೈಟ್ ಫುಲ್ ಹೋಂ ಸ್ಟೇ ಮೇಲೆ  ಕೊಪ್ಪ ಉಪವಿಭಾಗದ ಎ ಎಸ್ ಪಿ ಗುಂಜನ್ ಆರ್ಯ  ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದೆ.  ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ 35 ಜನರನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ್ದ  5,54,140.00 ನಗದು, 4 ಕಾರು ಮತ್ತು 39 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.  ದಾಳಿಯಲ್ಲಿ  ಶೃಂಗೇರಿ ಪಿ.ಎಸ್.ಐ. ಮುತ್ತುರಾಜ್,  ಜಯಪುರದ ಶ್ರೀಮತಿ ಜ್ಯೋತಿ ಮತ್ತು ಪೊಲೀಸ್ ಸಿಬ್ಬಂದಿ ಮೂರ್ತಪ್ಪ,  ಪ್ರಸನ್ನ ಕುಮಾರ್,  ಕಾಂತರಾಜು,  ಪ್ರವೀಣ ಬ. ನಲಗಾವಲ ಮತ್ತು  ಆನಂದ ಬಿರಾದಾರ  ಭಾಗವಹಿಸಿದ್ದರು.

  ಚಿಕ್ಕಮಗಳೂರು ನಗರದ ಮಧುವನ ಲೇಔಟ್ ಪಾರ್ಕ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಜಿಲ್ಲಾ ಅಪರಾಧ ಪೊಲೀಸ್  ತಂಡ ದಾಳಿ ನಡೆಸಿ, 9 ಜನರನ್ನು   ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ್ದ  18,790.00 ನಗದು ವಶಪಡಿಸಿಕೊಂಡಿದ್ದಾರೆ.


ಪೋಕ್ಸೋ-ಕಾಯ್ದೆ ಪ್ರಕರಣ : ಆರೋಪಿಗೆ ಶಿಕ್ಷೆ, ದಂಡ ಹಾಗೂ 4 ಲಕ್ಷ ರೂ .ಪರಿಹಾರ ನೀಡಲು ಆದೇಶ



ಮೂಡಿಗೆರೆ:  ಪೋಕ್ಸೋ-ಕಾಯ್ದೆ ಪ್ರಕರಣ ಒಂದರ ಸಂಬಂಧ  ಆರೋಪಿಗೆ   ಶಿಕ್ಷೆ,  ದಂಡ ಹಾಗೂ 4 ಲಕ್ಷ ರೂ .ಪರಿಹಾರ ನೀಡುವಂತೆ ನ್ಯಾಯಾಲಯ  ತೀರ್ಪು ನೀಡಿದೆ . 
ಆರೋಪಿ  ಡಿ .ಎಂ .ಮಧು ವಿರುದ್ಧ ಪ್ರಕರಣ ದಾಖಲಾಗಿತ್ತು .
ಪ್ರಕರಣದ ವಿಚಾರಣೆ ನಡೆಸಿದ  ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ .ವೆಂಕಟೇಶ್  ಆರೋಪಿಗೆ 3 ವರ್ಷ ಸಾಮಾನ್ಯ ಶಿಕ್ಷೆ ಮತ್ತು 5,000/- ರೂ ದಂಡ ,ದಂಡ ಕಟ್ಟಲು ತಪ್ಪಿದ್ದಲ್ಲಿ ಹೆಚ್ಚುವರಿ 2 ½ ವರ್ಷ, ಸಾಮಾನ್ಯ ಸಜೆ,  1,000/- ರೂ ದಂಡ, ತಪ್ಪಿದ್ದಲ್ಲಿ 03 ತಿಂಗಳ ಸಾಮಾನ್ಯ ಸಜೆ ವಿಧಿಸಿದ್ದಾರೆ .

ಹಾಗೂ ಕಲಂ:- 4(2) ಪೋಕ್ಸೋ ಕಾಯ್ದೆ ಹಾಗೂ ಕಲಂ:-376(3) ಐಪಿಸಿ ರ ಪ್ರಕಾರ 20 ವರ್ಷ ಸಜೆ ಮತ್ತು 50,000/- ರೂ ದಂಡ ವಿಧಿಸಿದ್ದು, ಕಟ್ಟಲು ತಪ್ಪಿದ್ದಲ್ಲಿ ಹೆಚ್ಚುವರಿ 05 ವರ್ಷ ಸಾಮಾನ್ಯ ಸಜೆ ವಿಧಿಸಿದ್ದಾರಲ್ಲದೆ ಸಂತ್ರಸ್ಥೆಗೆ ಪರಿಹಾರ ಮೊತ್ತವಾಗಿ 4,00,000/- ರೂ ಪಾವತಿಸಲು ಆದೇಶಿಸಿದ್ದಾರೆ.

ಮೂಡಿಗೆರೆ ವೃತ್ತ ನಿರೀಕ್ಷಕ ಜಗನ್ನಾಥ್ ತನಿಖೆ ನಡೆಸಿದ್ದರು . 

ಶುಕ್ರವಾರ, ಸೆಪ್ಟೆಂಬರ್ 23, 2022

ಸಾವಿನಲ್ಲೂ ಮೆರೆದ ಸಾರ್ಥಕತೆ ; 9 ಜನರ ಬಾಳಿಗೆ ಬೆಳಕು ನೀಡಿದ 'ರಕ್ಷಿತಾ' -ಚಿಕ್ಕಮಗಳೂರಿನ ಹಿರಿಮೆಗೆ ಮತ್ತೊಂದು ಗರಿ


 ಚಿಕ್ಕಮಗಳೂರು :1978 .ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹೆಸರು ದೇಶವಿದೇಶಗಳಲ್ಲಿ ಮನ್ನಣೆ ಪಡೆದಿತ್ತು . 

ಕಾರಣ ;ತುರ್ತು ಪರಿಸ್ಥಿತಿಯ ಬಳಿಕ ಸೋತು ಸುಣ್ಣವಾಗಿದ್ದ  ಮಾಜಿ ಪ್ರಧಾನಿ ಇಂದಿರಾಗಾಂಧಿ ಸ್ಪರ್ಧೆ . ಗೆಲುವು ಸಾಧಿಸಿ ರಾಜಕೀಯ ಪುನರ್ಜನ್ಮ  ಪಡೆದಿದ್ದರು .

ಈಗ ಮತ್ತೊಮ್ಮೆ ಚಿಕ್ಕಮಗಳೂರು ಜಿಲ್ಲೆಯ ಹಿರಿಮೆಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದೆ .

ಇದು ರಾಜಕೀಯ ಕಾರಣಕ್ಕಾಗಿ ಅಲ್ಲ ; ಮಾನವೀಯ -ಹೃದಯಸ್ಪರ್ಶಿ ಭಾವಕ್ಕಾಗಿ .

ಚಿಕ್ಕಮಗಳೂರು ನಗರದ ಬಸವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 9 ನೇ ತರಗತಿಯಲ್ಲಿ  ವ್ಯಾಸಂಗ ಮಾಡುತ್ತಿದ್ದ ರಕ್ಷಿತಾಳ ಪಾಲಿಗೆ ಸೆ.18  ಕರಾಳ ದಿನ .

ಎಐಟಿ ವೃತ್ತದ ಸಮೀಪ ಬಸ್ಸಿನಿಂದ ಇಳಿಯುವಾಗ ಆಯತಪ್ಪಿ ಬಿದ್ದು ತೀವ್ರ ಗಾಯಗೊಂಡಿದ್ದ ಆಕೆಯನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ದೃಢಪಡಿಸಿದ ಬಳಿಕ ಚಿಕ್ಕಮಗಳೂರು ಆಸ್ಪತ್ರೆಗೆ ಕರೆತರಲಾಯಿತು .

ಮನವೊಲಿಕೆ - ದಿಟ್ಟ ನಿರ್ಧಾರ :ಕಡೂರು ತಾಲ್ಲೂಕಿನ ಸೋಮನಹಳ್ಳಿ ತಾಂಡ್ಯದ ಶೇಖರ್ ನಾಯ್ಕ್ ಮತ್ತು ಲಕ್ಷ್ಮಿ ದಂಪತಿ ಪುತ್ರಿ ರಕ್ಷಿತಾ. ನೂರಾರು ಕನಸುಗಳನ್ನು ಹೊತ್ತ ಬಾಲೆ.

ಮಗಳ ಸ್ಥಿತಿಯನ್ನು ಕಂಡು ಮುಂದೇನು ಎಂಬ ಚಿಂತೆಯಲ್ಲಿ ಇದ್ದ  ಈ ಕುಟುಂಬವನ್ನು ಸಂಪರ್ಕಿಸಿದ ಜಿಲ್ಲಾಡಳಿತ ಮಗಳ ಅಂಗಾಂಗ ದಾನ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಯಿತು .

ನೋವು ದುಃಖದ ಮಧ್ಯೆಯೂ ಮಗಳ  ಅಂಗಾಂಗ ದಾನಕ್ಕೆ ಸಮ್ಮತಿಸುವ ಮೂಲಕ ಈ ಕುಟುಂಬ ಆದರ್ಶ - ಮಾನವೀಯತೆಗೆ ನೈಜ ಅರ್ಥ  ತುಂಬಿತು. ಎತ್ತರದ ಸ್ಥಾನದಲ್ಲಿ ನಿಂತಿತು . 

ಚಿಕ್ಕಮಗಳೂರು ಜಿಲ್ಲಾ ಕೇಂದ್ರದ ಅರಳಗುಪ್ಪೆ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ .ಸಿ. ಮೋಹನ್ ಕುಮಾರ್ ತಂಡ  ಅಂಗಾಂಗ ತೆಗೆಯುವ ಪ್ರಕ್ರಿಯೆಗೆ ಆಸ್ಪತ್ರೆಯನ್ನು ಸಜ್ಜುಗೊಳಿಸಿತು .

ಜಿಲ್ಲಾ ಆಸ್ಪತ್ರೆಯ ಡಾಕ್ಟರ್ ಚಂದ್ರಶೇಖರ ಸಾಲಿಮಠ, ಪ್ರಶಾಂತ್ ,ನಾಗೇಶ್ ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗ ಸಿಕ್ಕ ಅವಕಾಶವನ್ನು ಸವಾಲಾಗಿ ಸ್ವೀಕರಿಸಿತು .

ಮಣಿಪಾಲ ಮತ್ತು ಕೆಎಂಸಿಯಿಂದ ಬಂದಿದ್ದ ವೈದ್ಯರ ಸಮ್ಮುಖದಲ್ಲಿ ಎಲ್ಲಾ ಪ್ರಕ್ರಿಯೆಗಳು ಸಾಂಗವಾಗಿ ನಡೆಯುವ ಮೂಲಕ ಇಷ್ಟೊಂದು ಅಂಗಾಂಗ ತೆಗೆಯುವ ಈ ಪ್ರಕ್ರಿಯೆ ನಡೆಸಿದ "ರಾಜ್ಯದ ಪ್ರಥಮ ಜಿಲ್ಲಾ ಆಸ್ಪತ್ರೆ "ಎಂಬ ಹೆಗ್ಗಳಿಕೆಗೆ ಭಾಜನವಾಯಿತು . "ದಾಖಲೆ" ಬರೆಯಿತು .

9  ಜನರ ಬಾಳಿಗೆ ಆಸರೆ  :ರಕ್ಷಿತಾಳಿಂದ ಪಡೆದ ಹೃದಯ, ನೇತ್ರ, ಮೂತ್ರಕೋಶ, ಯಕೃತ್ತು 9 ಜನರಿಗೆ ಜೋಡಿಸುವ ಮೂಲಕ ಆಕೆ ಇನ್ನೊಬ್ಬರ ಬಾಳಿಗೆ ಬದುಕು - ಬೆಳಕು ನೀಡಿದಳು.ಸಾವಿನಲ್ಲೂ ಸಾರ್ಥಕತೆ ಮೆರೆದ ಹೆಗ್ಗಳಿಕೆಗೆ ಪಾತ್ರವಾದಳು.

ಆಸ್ಪತ್ರೆಯಿಂದ ಅಂಗಾಂಗಗಳನ್ನು  ವಿಶೇಷ ಹೆಲಿಕಾಪ್ಟರ್ - ಆ್ಯಂಬುಲೆನ್ಸ್ ಮೂಲಕ  ಬೆಂಗಳೂರು - ಮಂಗಳೂರಿಗೆ ರವಾನಿಸುವ  ಸನ್ನಿವೇಶಕ್ಕೆ ಮಡುಗಟ್ಟಿದ ಶೋಕದ ಮಧ್ಯೆ ನೂರಾರು ಜನ ಸಾಕ್ಷಿಯಾದರು .

ಬಿಕ್ಕಿ ಬಿಕ್ಕಿ ಅತ್ತರು : ಅಂಗಾಂಗದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೃತ  ದೇಹವನ್ನು ಪೋಷಕರಿಗೆ ಒಪ್ಪಿಸಲಾಯಿತು  . 

ಬಸವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಸಹಪಾಠಿಗಳು ಬಿಕ್ಕಿ ಬಿಕ್ಕಿ ಅತ್ತರು .ಹೃದಯಸ್ಪರ್ಶಿ ಅಂತಿಮ ನಮನ ಸಲ್ಲಿಸಿದರು .

ಹುಟ್ಟೂರಿನಲ್ಲಿಯೂ ಭಾವಪೂರ್ಣ ವಿದಾಯ.ನೂರಾರು ಜನರಿಂದ ಅಂತಿಮ ನಮನದ ಬಳಿಕ ಅಂತ್ಯಸಂಸ್ಕಾರ ನಡೆಯಿತು.

ಅಭಿನಂದನೆಗಳ ಮಹಾಪೂರ :ಈಗ ಎಲ್ಲರ ಬಾಯಲ್ಲೂ ಶೇಖರ್ ನಾಯ್ಕ್ ಮತ್ತು ಲಕ್ಷ್ಮೀ ಬಾಯಿ ದಂಪತಿಗಳದ್ದೇ ಮಾತು .ಅವರ ಗಟ್ಟಿ ನಿರ್ಧಾರಕ್ಕೆ ಅಭಿನಂದನೆಗಳ ಮಹಾಪೂರ .ಜಿಲ್ಲಾ ಆಸ್ಪತ್ರೆ ವೈದ್ಯರ ಸಾಧನೆ ಬಗ್ಗೆಯೂ ಮನಃಪೂರ್ವಕ ಮೆಚ್ಚುಗೆ .

ಅಮಾನತು -ಪರಿಹಾರ : ಕರ್ತವ್ಯಲೋಪದ ಆರೋಪದ ಮೇಲೆ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಅಮಾನತುಪಡಿಸಲಾಗಿದೆ .ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 3 ಲಕ್ಷ ರೂ ಪರಿಹಾರ ಪ್ರಕಟಿಸಿದೆ .

ರಾಜ್ಯ ಸರ್ಕಾರ 6 ಲಕ್ಷ ರೂ ಹಾಗೂ ತಾಂಡಾ ಅಭಿವೃದ್ಧಿ ನಿಗಮದಿಂದ 1ಲಕ್ಷ ರೂ , ಕೌಶಲ್ಯ ಅಭಿವೃದ್ಧಿ ಯೋಜನೆಯಡಿ 2 ಲಕ್ಷ ರೂ.ನೀಡಲು  ನಿರ್ಧರಿಸಲಾಗಿದೆ  .

ಈ ಕುಟುಂಬದ ಬದುಕಿಗೆ ಆಸರೆ ದೊರಕಿಸಲು ಉದ್ಯೋಗ , ಇನ್ನಷ್ಟು ಆರ್ಥಿಕ ನೆರವು ಕಲ್ಪಿಸುವ ಬೇಕೆಂಬ ಒತ್ತಾಯ ಕೇಳಿಬಂದಿದೆ .


ಬರೆಹ :ದಿನೇಶ್ ಪಟವರ್ಧನ್