udayanews

ಶನಿವಾರ, ಅಕ್ಟೋಬರ್ 22, 2022

ಸರ್ಕಾರಿ ಶಾಲೆಗಳಲ್ಲಿ ಪೋಷಕರಿಂದ ದೇಣಿಗೆ ಸಂಗ್ರಹದ ಸುತ್ತೋಲೆ: ಸಿಪಿಐ ತೀವ್ರ ಟೀಕೆ

 ಚಿಕ್ಕಮಗಳೂರು :ಶಾಲೆಗಳಲ್ಲಿನ ಮೂಲ ಸೌಕರ್ಯಗಳನ್ನು ಒದಗಿಸಲು ಶಾಲಾ ಮಕ್ಕಳ ಪೋಷಕರಿಂದ ದೇಣಿಗೆ ಸಂಗ್ರಹಿಸುವ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆಯ ಕ್ರಮ ರಾಜ್ಯ ಸರ್ಕಾರ ಆರ್ಥಿಕ ದಿವಾಳಿತನ ಎದುರಿಸುತ್ತಿರುವುದರ ಸಂಕೇತವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಟೀಕಿಸಿದೆ .

 ಈ ಕೂಡಲೆ ದೇಣಿಗೆ ಸಂಗ್ರಹದ ಸುತ್ತೋಲೆ ಹಿಂಪಡೆಯಬೇಕೆಂದು  ಪಕ್ಷ (ಸಿಪಿಐ) ಆಗ್ರಹ ಪಡಿಸಿದ್ದು ಶಾಲಾ ಶಿಕ್ಷಣ ಮಕ್ಕಳ ಸಂವಿಧಾನ ಬದ್ಧ ಮೂಲಭೂತ ಹಕ್ಕಾಗಿದೆ.ಮಕ್ಕಳ ಕಲಿಕೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಾಗರೀಕ ಸರ್ಕಾರದ ಜವಾಬ್ದಾರಿ ಯಾಗಿದೆ. ಸುತ್ತೋಲೆ ಹಿಂಡೆಯದಿದ್ದರೆ   ರಾಜ್ಯಾದ್ಯಂತ ಚಳವಳಿ ರೂಪಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಪಕ್ಷದ  ರಾಜ್ಯ ಸಹ ಕಾರ್ಯದರ್ಶಿ ಅಮ್ಜದ್ ಎಚ್ಚರಿಸಿದ್ದಾರೆ 


ಕಾಡೂಗೊಲ್ಲರ ಸಂಘಟಿತ ಹೋರಾಟಕ್ಕೆ ಶಾಸಕರ ಬೆಂಬಲ

 ಚಿಕ್ಕಮಗಳೂರು-ಕಾಡುಗೊಲ್ಲರ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಬೇಕು ಎನ್ನುವ ಬೇಡಿಕೆಗೆ ತಮ್ಮ ಸಂಪೂರ್ಣ ಬೆಂಬಲವಿದ್ದು,ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಶಾಸಕ ಸಿ.ಟಿ.ರವಿ ಕರೆ ನೀಡಿದರು. ಕಾಡೂಗೊಲ್ಲರ  ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಸಖರಾಯಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. . 

ಎಸ್‌ಟಿ ಸಮುದಾಯಕ್ಕೆ ಸೇರ್ಪಡೆಗೊಳಿಸುವ  ಹೋರಾಟದಲ್ಲಿ  ಗುರಿ ಮುಟ್ಟಿಸುವವರೆಗೆ ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.  


 ಶಾಸಕ ಬೆಳ್ಳಿ ಪ್ರಕಾಶ್  ಕಾಡುಗೊಲ್ಲರ ಬೇಡಿಕೆ ಈಡೇರಿಕೆಗೆ ಶ್ರಮಿಸುತ್ತೇನೆ ಎಂದು ಭರವಸೆ ಕೊಟ್ಟರು 

ರಾಜ್ಯದಲ್ಲಿ 'ಫಸಲ್‌ ಬಿಮಾ ಯೋಜನೆ' ಫೇಲ್‌ : ಪಾವತಿಸಿದ ಹಣದಷ್ಟೂ ಬಂದಿಲ್ಲ !! ;

 


 ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಕೃಷಿಕರ ಕೈಹಿಡಿಯಬೇಕಾದ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ ಕರ್ನಾಟಕದಲ್ಲಿ ಸಂಪೂರ್ಣ ಫೇಲ್‌ ಆಗಿದೆ. ಈಗ ಆಡಳಿತಾರೂಢ ಚುನಾಯಿತ ಪ್ರತಿನಿಧಿಗಳೂ ಬೆಳೆ ವಿಮೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಕಷ್ಟಕಾಲದಲ್ಲಿ ರೈತರ ನೆರವಿಗೆ ಬರಬೇಕಿದ್ದ ಬೆಳೆ ವಿಮೆ ಯೋಜನೆಯು ರಾಜ್ಯದಲ್ಲಿ ಅನ್ನದಾತರ ವಿಶ್ವಾಸವನ್ನು ಕಳೆದುಕೊಂಡು ವರ್ಷಗಳೇ ಸಂದಿವೆ. ಈಗ ಆಡಳಿತಾರೂಢ ಚುನಾಯಿತ ಪ್ರತಿನಿಧಿಗಳೂ  ವಿಮೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಕೃಷಿಕರ ಕೈಹಿಡಿಯಬೇಕಾದ 'ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ' ಸಂಪೂರ್ಣ ಫೇಲ್‌ ಆಗಿದೆ.ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಅತಿವೃಷ್ಟಿ, ನೆರೆ ಹಾವಳಿಯಿಂದ ವ್ಯಾಪಕ ಬೆಳೆ ನಷ್ಟವಾಗಿದ್ದು, 2019-20ನೇ ಸಾಲಿನಿಂದ ಈವರೆಗೆ ಒಟ್ಟು 53.94 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾಳಾಗಿದೆ. ಇಂತಹ ಸಂಕಷ್ಟ ಕಾಲದಲ್ಲಿ ಬೆಳೆ ವಿಮೆ ಆಸರೆಯಾಗಬೇಕಿತ್ತು. ಆದರೆ, ರೈತರು ತಮ್ಮ ಬೆವರು ಸುರಿಸಿ ಕಟ್ಟಿದ ಪ್ರೀಮಿಯಂ ಕೂಡ ಕೈಗೆ ಸಿಗುತ್ತಿಲ್ಲ..!ಬೆಳೆ ಹಾಳಾದ ಸಂದರ್ಭದಲ್ಲಿ ನಿಗದಿತ ಪರಿಹಾರದ (ಸಮ್‌ ಅಶ್ಯೂರ್ಡ್‌) ಬದಲಿಗೆ ಕಟ್ಟಿದ ಪ್ರೀಮಿಯಂ ಕೂಡ ರೈತರಿಗೆ ಸಿಗುತ್ತಿಲ್ಲ. ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟಕ್ಕೆ ಪರಿಹಾರ ಪಾವತಿಸಬೇಕಿದೆ. ಆದರೆ, ಆಣೆವಾರು ಮಾಡುವಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ವಿಮೆ ಕಂಪೆನಿಗಳ ಪರವಾಗಿ ಕೆಲಸ ಮಾಡುತ್ತಿರುವುದು, ವಿಮಾ ಷರತ್ತುಗಳಲ್ಲಿ ಲೋಪವಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ರೈತರು ಸಂತ್ರಸ್ತರಾಗಿದ್ದಾರೆ. ರೈತರು ತಮ್ಮ ಈ ಎಲ್ಲ ಕಷ್ಟವನ್ನು ಹೇಳಿಕೊಳ್ಳಲು ವಿಮೆ ಕಂಪೆನಿಗಳ ಟೋಲ್‌ ಫ್ರೀ ಸಂಖ್ಯೆಗಳೇ ಕೆಲಸ ಮಾಡುತ್ತಿಲ್ಲ.*ಸಾಲದಲ್ಲೇ ಕಂತು ಕಡಿತ:*ಬ್ಯಾಂಕ್‌, ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಮಂಜೂರಾತಿ ವೇಳೆ ವಿಮೆ ಕಂತನ್ನು ಕಡಿತ ಮಾಡಿಕೊಂಡೇ ರೈತರಿಗೆ ಸಾಲದ ಮೊತ್ತ ನೀಡಲಾಗುತ್ತದೆ. ಕಡ್ಡಾಯ ವ್ಯವಸ್ಥೆಯಂತಾಗಿರುವ ಈ ವಿಮೆ ಕಂತು ಬಹುತೇಕ ವಿಮಾ ಕಂಪೆನಿಗಳ ಪಾಲು ಎಂಬಂತಾಗಿದೆ. ಬೆಳೆ ಸಾಲ ಪಡೆಯುವ ರೈತರ ಹೊರತಾಗಿ, ಉಳಿದ ಬಹುತೇಕ ರೈತರು ವಿಮೆ ಯೋಜನೆ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ.ಪರಿಣಾಮ ರಾಜ್ಯದಲ್ಲಿ 2019ರಿಂದ ಈವರೆಗೆ ಒಟ್ಟಾರೆ 38,31,749 ರೈತರಿಗೆ ಸೇರಿದ ಒಟ್ಟು 53,94,575 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದೆ. ಈ ಎಲ್ಲ ರೈತರೂ ಬೆಳೆ ವಿಮೆಯನ್ನೇ ಮಾಡಿಸಿರಲಿಲ್ಲ. ಬೆಳೆ ವಿಮೆ ಕೈಹಿಡಿಯುತ್ತದೆ ಎಂಬ ಭರವಸೆಯನ್ನೇ ಈ ರೈತರು ಕಳೆದುಕೊಂಡಿದ್ದಾರೆ..                      ಶಬರೀಶ್  ಸದಸ್ಯರು  ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಶೃಂಗೇರಿ

ಕಾರ್ಮಿಕರ ಮೇಲೆ ಹಲ್ಲೆ ಖಂಡಿಸಿ ಅ.27 ರಂದು ಜಿಲ್ಲಾ ಕೇಂದ್ರದಲ್ಲಿ ಅಹೋರಾತ್ರಿ ಪ್ರತಿಭಟನೆ


ಚಿಕ್ಕಮಗಳೂರು :ಇತ್ತೀಚೆಗೆ ಬಾಳೆಹೊನ್ನೂರಿನ ಸಮೀಪ ಕಾರ್ಮಿಕರ ಮೇಲೆ ಬಿಜೆಪಿ ಮುಖಂಡ ನಡೆಸಿದ ದೌರ್ಜನ್ಯ ಖಂಡಿಸಿ ಹಾಗೂ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಅ.27 ರಂದು ಚಿಕ್ಕಮಗಳೂರಿನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲು ದಲಿತ ಸಂಘರ್ಷ ಸಮಿತಿ ನಿರ್ಧರಿಸಿದೆ ಎಂದು ಮುಖಂಡ ಶ್ರೀನಿವಾಸ್ ಹೇಳಿದ್ದಾರೆ .

ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಮೀನಮೇಷ ನಡೆಸಿದೆಯಲ್ಲದೆ ,ಬಾಳೆಹೊನ್ನೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಚಳವಳಿ ಹತ್ತಿಕ್ಕಲು 144 ನೇ.ಸೆಕ್ಷನ್ ಜಾರಿ ಗೊಳಿಸಿ ದ್ದಾರೆ ಎಂದು ಆರೋಪಿಸಿದ್ದಾರೆ .ಕೂಲಿ ಕಾರ್ಮಿಕರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ದ್ದಾರೆ .
ದತ್ತಮಾಲೆ ಅಭಿಯಾನ : ನವೆಂಬರ್ 7 ರಿಂದ 13 ರವರೆಗೆ ದತ್ತಮಾಲೆ ಅಭಿಯಾನ ನಡೆಸಲು ಶ್ರೀರಾಮ ಸೇನೆ ನಿರ್ಧರಿಸಿದ್ದು , ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಯಿತು .
ದತ್ತಮಾಲಾ ಧಾರಣೆ , ಮೆರವಣಿಗೆ ,ದತ್ತ ಪಾದುಕೆ  ದರ್ಶನ  ಕಾರ್ಯಕ್ರಮಗಳನ್ನು   ಶ್ರೀರಾಮಸೇನೆ  ಆಯೋಜಿಸಿದೆ .

ದೀಪೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
ಚಿಕ್ಕಮಗಳೂರು,: ಬಿಂಡಿಗ ಮಲ್ಲೇನಹಳ್ಳಿ ಆದಿಶಕ್ತ್ಯಾತ್ಮಕ ಶ್ರೀ ದೇವಿರಮ್ಮ ಜಾತ್ರೆಯ ಪ್ರಯುಕ್ತ ಅ. ೨೩ ರಿಂದ ೨೭ ರ ವರೆಗೆ ಭಕ್ತಾದಿಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ
ಚಿಕ್ಕಮಗಳೂರು ಬಸ್ ನಿಲ್ದಾಣ, ಸಿಂಡಿಕೆಟ್ ಬ್ಯಾಂಕ್, (ಶೃಂಗಾರ್ ಸರ್ಕಲ್) ಸರ್ಕಾರಿ ಡಿಪ್ಲೋಮ ಕಾಲೇಜ್ (ಟೌನ್ ಕ್ಯಾಂಟೀನ್) ಕೈಮರ, ಕಡೂರು ವಾಹನ ನಿಲ್ದಾಣ, ಬೀರೂರು ವಾಹನ ನಿಲ್ದಾಣ, ಹಾಗೂ ತರೀಕೆರೆ ವಾಹನ ನಿಲ್ದಾಣ(ಲಿಂಗದಹಳ್ಳಿ-ಶಾಂತವೇರಿ ಮಾರ್ಗ) ದಿಂದ ಮಲ್ಲೇನಹಳ್ಳಿಗೆ ವಿಶೇಷ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ

ಶುಕ್ರವಾರ, ಅಕ್ಟೋಬರ್ 21, 2022

೪ ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲಾ ಉತ್ಸವ

  ಚಿಕ್ಕಮಗಳೂರು :  ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ  ಚಿಕ್ಕಮಗಳೂರು ಜಿಲ್ಲಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.   


ಜಾನಪದ ಜಾತ್ರೆ, ಸಿನಿಮೋತ್ಸವ, ನೃತ್ಯೋತ್ಸವ, ಪುಸ್ತಕ ಮೇಳ, ವಸ್ತುಪ್ರದರ್ಶನ, ಕೃಷಿಮೇಳ, ಆಹಾರ ಮೇಳ ಇನ್ನಿತರೆ  ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು  ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ  ಎಂದು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಮಾಹಿತಿ ನೀಡಿದರು .  ಶಾಸಕ ಸಿ.ಟಿ.ರವಿ ಮಾತನಾಡಿ, ಕಳೆದ ಬಾರಿಯ ಕಾರ್ಯಕ್ರಮದ ಲೋಗೋ, ಶೀರ್ಷಿಕೆ, ಅಡಿಬರಹವನ್ನು ಈ ಬಾರಿಯೂ ಮುಂದುವರಿಸಲಾಗುತ್ತದೆ  ಪ್ರಯುಕ್ತ ಪ್ರೋ ಕಬಡ್ಡಿ ಮಾದರಿಯಲ್ಲಿ ಕಬಡ್ಡಿ ಸ್ಪರ್ಧೆ ಆಯೋಜಿಸುವ ಕುರಿತು ಪ್ರೋ ಕಬಡ್ಡಿ ಆಯೋಜಕರಲ್ಲಿ ಚರ್ಚಿಸಲಾಗಿದೆ. ಜಾನಪದ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ ಎಂದು  ತಿಳಿಸಿದರು.

ವೈಯುಕ್ತಿಕ ಜೀವನ ಬದಿಗೊತ್ತಿ ಕರ್ತವ್ಯ ನಿರ್ವಹಿಸುವ ಪೊಲೀಸರನ್ನು ಗುರುತಿಸಬೇಕು: ಶಾಸಕ ಸಿ.ಟಿ.ರವಿ

 


 ಚಿಕ್ಕಮಗಳೂರು, ಅ.೨೧:   ತಮ್ಮ ವೈಯುಕ್ತಿಕ ಜೀವನ ಬದಿಗೊತ್ತಿ ಕಷ್ಟದ ಸಂದರ್ಭಗಳಲ್ಲಿಯೂ ಒತ್ತಡಗಳನ್ನು ಎದುರಿಸಿ ದಿನದ ೨೪ ಗಂಟೆ ಕಾರ್ಯನಿರ್ವಹಿಸುವ ಕರ್ತವ್ಯ ನಿರ್ವಹಿಸುವ ಪೊಲೀಸರನ್ನು ಗುರುತಿಸಬೇಕು ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೇಳಿದರು.   ನಾವೆಲ್ಲರೂ ಸುರಕ್ಷಿತವಾಗಿರಬೇಕಾದರೆ ಪ್ರಾಣವನ್ನು ಪಣಕ್ಕಿಟ್ಟು ದೇಶ ಕಾಯುವ ಸೈನಿಕರು ಹಾಗೂ ನಾಗರೀಕ ಸಮಾಜದ ಒಳಗೆ ರಕ್ಷಣೆ ನೀಡುವ ಪೊಲೀಸರು ಕಾರಣ ಎಂದರು.   

ಪೊಲೀಸ್ ಹುತಾತ್ಮರ ದಿನಾಚರಣೆ  ಉದ್ದೇಶಿಸಿ  ಮಾತನಾಡಿ  ನೈತಿಕ ಮೌಲ್ಯಗಳ ಆಧಾರದಲ್ಲಿ  ನಡೆದುಕೊಳ್ಳುವ ಸಮಾಜ ನಿರ್ಮಾಣ ಆಗುವುದಿಲ್ಲವೋ ಅಲ್ಲಿಯವರೆಗೆ ಕಾನೂನು , ಪೊಲೀಸ್ ವ್ಯವಸ್ಥೆಯ ಮೂಲಕ ಸುಸ್ಥಿರ ಸಮಾಜ ನಿರ್ಮಾಣದ ಕಡೆಗೆ ಹೆಜ್ಜೆ ಹಾಕಬೇಕಾಗುತ್ತದೆ. ಸಮಾಜದಲ್ಲಿ ಆಸ್ಪತ್ರೆ, ಪೊಲೀಸ್ ಠಾಣೆ ಮತ್ತು ಅನಾಥಾಲಯಗಳು ಹೆಚ್ಚಾಗುವುದು ಒಳ್ಳೆಯ ಸಂಗತಿಯಲ್ಲ ಎಂದರು . 

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿದರು,   ಪೊಲೀಸ್ ಹುತಾತ್ಮರನ್ನು ಸಂಸ್ಮರಣೆ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್    ಜಿಲ್ಲೆಯ ೭ ಕರ್ನಾಟಕದ ೧೧ ಪೊಲೀಸರು ಸೇರಿ  ದೇಶದಲ್ಲಿ ಈ ವರ್ಷ ೨೬೪ ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್  ಉಪಸ್ಥಿತರಿದ್ದರು.

ಗುರುವಾರ, ಅಕ್ಟೋಬರ್ 20, 2022

ಅ 24 ರಿಂದ ಬಿಂಡಿಗ ದೇವೀರಮ್ಮನವರ ದೀಪೋತ್ಸವ; ಭಾರಿ ಪ್ರಮಾಣದ ಭಕ್ತರ ನಿರೀಕ್ಷೆ

 ಚಿಕ್ಕಮಗಳೂರು,:  ತಾಲ್ಲೂಕಿನ ಬಿಂಡಿಗ ಮಲ್ಲೇನಹಳ್ಳಿಯ  ದೇವೀರಮ್ಮ ದೇವಸ್ಥಾನದಲ್ಲಿ ಬಿಂಡಿಗ ಆದಿಶಕ್ತ್ಯಾತ್ಮಕ ಶ್ರೀ ದೇವೀರಮ್ಮನವರ ದೀಪೋತ್ಸವವು ಅಕ್ಟೋಬರ್ ೨೪ರಿಂದ ೨೭ರವರೆಗೆ ನಡೆಯಲಿದೆ. 

ಕೊರೋನ ಹಿನ್ನೆಲೆಯಲ್ಲಿ  ಕಳೆದ 2 ವರ್ಷಗಳಿಂದ ಕಳೆಗುಂದಿದ್ದ ದೇವಿರಮ್ಮ ಉತ್ಸವ ಈ ಬಾರಿ ಕಳೆಗಟ್ಟಲಿದೆ .ರಾಜ್ಯದ ವಿವಿಧ ಭಾಗಗಳಿಂದ ಬೆಟ್ಟವೇರಲು ಭಾರೀ ಸಂಖ್ಯೆಯಲ್ಲಿ ಜನ ಬರುವ ನಿರೀಕ್ಷೆಯಿದ್ದು ,ಪ್ರತಿಕೂಲ ಹವಾಮಾನ ಉತ್ಸಾಹಕ್ಕೆ ತಣ್ಣೀರು ಎರಚುವ ಸಾಧ್ಯತೆಯೂ ಇದೆ .   

ಅ.೨೪ರಂದು ಬೆಳಿಗ್ಗೆ ಶ್ರೀ ದೇವೀರಮ್ಮನ ಬೆಟ್ಟದಲ್ಲಿ ಅಭಿಷೇಕ ನಂತರ ಪೂಜೆ ಪ್ರಾರಂಭವಾಗಲಿದ್ದು, ರಾತ್ರಿ ೭ ಗಂಟೆಗೆ ದೀಪೋತ್ಸವ. ೨೫ ರಂದು ಬೆಳಿಗ್ಗೆ ಗಂಟೆ ೮.೪೫ಕ್ಕೆ ಶ್ರೀ ದೇವಿಯವರಿಗೆ ಉಡುಗೆ, ಪೂಜೆ, ಸಂಜೆ ಬೆಣ್ಣೆ ಬಟ್ಟೆ ಸುಡುವುದು ನಂತರ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. 

೨೬ರಂದು ರಾತ್ರಿ ಶ್ರೀ ಮಹಾಗಣಪತಿ ಪೂಜೆ, ಪುಣ್ಯಾಹ, ಅಗ್ನಿಕುಂಡ ಪೂಜೆ, ಕಲಶ ಸ್ಥಾಪನೆ

ಕುಂಕುಮಾರ್ಚನೆ ಇತ್ಯಾದಿ ಪೂಜೆ ನಡೆಯಲಿದೆ. ೨೭ರಂದು ಸೂರ್ಯೋದಯಕ್ಕೆ ಕೆಂಡಾರ್ಚನೆ ನಂತರ ಮಹಾಮಂಗಳಾರತಿ, ಹರಕೆ ಒಪ್ಪಿಸುವುದು, ತೀರ್ಥಪ್ರಸಾದ ವಿನಿಯೋಗ ನಡೆಯಲಿವೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ತಿಳಿಸಿದೆ.