udayanews

ಗುರುವಾರ, ಅಕ್ಟೋಬರ್ 27, 2022

ಕಾಂತಾರ ಚಿತ್ರದಲ್ಲಿಯೂ ಜಾನಪದಕ್ಕೆ ಮಾತ್ರವಲ್ಲ ದೈವಗಳಿಗೂ ಅವಮಾನವಾಗಿದೆ ಎಂಬ ಆರೋಪಗಳಿವೆ :ಸಚಿವ ಸುನಿಲ್ ಕುಮಾರ್ ಗೆ ಅಮಿನ್ ಮಟ್ಟು ಪ್ರಶ್ನೆ

              ಹೆಡ್ ಬುಷ್ ಚಿತ್ರದಲ್ಲಿ  ನಮ್ಮ ಜನಪದ ಕಲೆಯಾದ ವೀರಗಾಸೆಗೆ ಅಪಮಾನವಾಗಿದೆ ಎಂಬ ಆರೋಪದ ಬಗ್ಗೆ ನಮ್ಮ   ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರು ವ್ಯಕ್ತಪಡಿಸಿದ ಕಾಳಜಿ ಅಭಿನಂದನಾರ್ಹ.ಸಚಿವರ ಟ್ವೀಟ್ ನೋಡಿಸಿನೆಮಾವನ್ನು ಸಿನೆಮಾವಾಗಿಯೇ ನೋಡಬೇಕು‌ ಎನ್ನುವ ನನ್ನ ಅಭಿಪ್ರಾಯವನ್ನು‌ ಪುನರ್ ಪರಿಶೀಲನೆಗೆ ಒಡ್ಡಿದ್ದೇನೆ.  'ಕಾಂತಾರ' ಚಿತ್ರ ನೋಡಿದ ಮುಂಬೈನ ನನ್ನ ಗೆಳೆಯನೊಬ್ಬ ಇತ್ತೀಚೆಗೆ ತನ್ನ ಮನಸ್ಸಲ್ಲಿ ಮೂಡಿರುವ ಪ್ರಶ್ನೆಗಳನ್ನು ನನ್ನಲ್ಲಿ ಹಂಚಿಕೊಂಡಿದ್ದ. ನನ್ನ ಅರಿವಿನ ಮಿತಿಯಲ್ಲಿ ಆ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೆ.ಆ ಪ್ರಶ್ನೋತ್ತರ ಇಲ್ಲಿದೆ:ಪಂಜುರ್ಲಿ-ಗುಳಿಗ ಭೂತಗಳು ಮನುಷ್ಯನ ಜೀವ ತೆಗೆಯುವಷ್ಟು ವಯಲೆಂಟ್ ಭೂತವೇ? ಎನ್ನುವುದು ಆ ಗೆಳೆಯನ ಮೊದಲ ಪ್ರಶ್ನೆ


.“  ಉಗ್ರಸ್ವರೂಪದ ಭೂತಗಳು ಇರುವುದು‌ ನಿಜ. ಆದರೆ  ನನಗೆ ತಿಳಿದ ಹಾಗೆ ದೈವ ಮೈಮೇಲೆ ಬಂದ ನಂತರ ಜೀವ ತೆಗೆದ ಉದಾಹರಣೆಗಳಿಲ್ಲ ಇಲ್ಲ ಎಂದೆ. ತಪ್ಪು ಮಾಡಿದವರು ಭೂತಗಳ ಭಯದಿಂದ ಸತ್ತ ಉದಾಹರಣೆಗಳಿವೆ.  ಪಂಜುರ್ಲಿ-ಗುಳಿಗ ಮಾತ್ರವಲ್ಲ ಸಾವಿರಕ್ಕೂ ಮಿಕ್ಕಿ ಭೂತಗಳಿವೆಯಲ್ಲಾ, ಅವು ಯಾವುದೂ ಕೂಡಾ ಭೂತದ ವೇಷದಲ್ಲಿದ್ದಾಗ ಮನುಷ್ಯನ ಕಿರುಬೆರಳಿಗೆ ಕೂಡಾ ಬೇನೆ ಮಾಡಿಲ್ಲ. ಪಾಡ್ದನಗಳಲ್ಲಿ ಹೇಳುವಂತೆ ಅದು ತಾಯಿ ರೀತಿ ಸಾಕುತ್ತಾ, ಮಾವನಂತೆ ರಕ್ಷಿಸುತ್ತಾ ಬಂದಿವೆಯೇ ಹೊರತು ಯಾರನ್ನೂ ಸಾಯಿಸಿಲ್ಲ” ಎಂದೆ.

“ಹಾಗಿದ್ದರೆ ಕಾಂತಾರ ಚಿತ್ರದಲ್ಲಿ ತೋರಿಸಿರುವುದು ದೈವಕ್ಕೆ ಮಾಡಿದ ಅಪಚಾರವಲ್ಲವೇ? ಎಂದು ಆತ ಕೇಳಿದ."ಭೂತ-ದೈವಗಳು ಕಟ್ಟು-ಕ್ರಮ ಇಲ್ಲದೆ ಇದ್ದಕ್ಕಿದ್ದ ಹಾಗೆ ಯಾರ ಮೈಮೇಲೆ ಆವಾಹನೆ ಬರುತ್ತಾ? ಎನ್ನುವುದು ಗೆಳೆಯನ ಎರಡನೇ ಪ್ರಶ್ನೆ.“ ಹಾಗೆಲ್ಲ ಎಲ್ಲರೂ ಭೂತ-ದೈವಗಳ ಪಾತ್ರಿಗಳಾಗಲು ಸಾಧ್ಯವಿಲ್ಲ. ಅವರಿಗೆ ಅಧಿಕೃತವಾಗಿ ಊರ ಸಮಸ್ತರು ಸೇರಿ ಎಣ್ಣೆಬೂಳ್ಯ ಕೊಡಬೇಕು. ಅದರ ನಂತರ ಅವನು ಕೋಲದ ಚಪ್ಪರದಡಿ ನಿಂತಾಗ ಮಧ್ಯಸ್ತಗಾರರು ದೈವದ ಇತಿಹಾಸವನ್ನು ಹೇಳಿ ಪಾತ್ರಿಯ ಮೈಮೇಲೆ ದೈವ ಬರುವಂತೆ ಎಲ್ಲರ ಜೊತೆ ಪ್ರಾರ್ಥಿಸುತ್ತಾರೆ. ಹಾಗೆ ಹೀಗೆ ಯಾರೋ ಬಿದ್ದಲ್ಲಿಂದ ಎದ್ದು ಭೂತ ಮೈಮೇಲೆ ಬಂದಿದೆ ಎಂದು ಹೇಳುವುದು ಸಂಪ್ರದಾಯಕ್ಕೆ ವಿರುದ್ದವಾಗಿರುವುದು. ಹಾಗೆ ಸಿಕ್ಕಸಿಕ್ಕವರ ಮೈಮೇಲೆ ಬರುವುದು ಸತ್ತು ಹೋದ ಸಂಬಂಧಿಕರ ಕುಲೆಗಳು ಮಾತ್ರ” ಎಂದೆ.ಹಾಗಿದ್ದರೆ   ಗಾಯಗೊಂಡು ಬಿದ್ದಿರುವ ಶಿವನ ಮೈಮೇಲೆ ಗುಳಿಗ ಬಂದಿರುವುದು ಅಪಚಾರ ಅಲ್ವಾ ಎಂದು ಗೆಳೆಯ ಕೇಳಿದ. ‘” ಭೂತ ಕಟ್ಟುವವರು ಎಂದಾದರೂ ವೇಷ ಹಾಕಿದ ನಂತರ ಸ್ವಾರ್ಥಿಗಳಾಗಿ ನಡೆದುಕೊಂಡದ್ದು, ಜನರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡಿದ್ದು ಇದೆಯೇ? ಎನ್ನುವುದು ಆತನ ಇನ್ನೊಂದು ಪ್ರಶ್ನೆ. “ಭೂತಗಳ ಕತೆಯಲ್ಲಿ ಇಂತಹ ಸೇಡು ತೀರಿಸಿಕೊಳ‍್ಳುವ ಘಟನಾವಳಿಗಳು ಇವೆ. ಆದರೆ ವೇಷ ಹಾಕುವ ನಲಿಕೆಯವರು, ಪಂಬದರು, ಪಾಣಾರ್ ಗಳು ತಮ್ಮ ಸ್ವಾರ್ಥಕ್ಕಾಗಿ ಭೂತಗಳನ್ನು ದುರುಪಯೋಗ ಮಾಡಿಕೊಂಡ ಉದಾಹರಣೆಗಳು ಕಡಿಮೆ,‌ ಆ ರೀತಿ ನಡೆದುಕೊಂಡವರಿಗೆ ಶಿಕ್ಷೆಯಾಗುತ್ತದೆ ಎಂಬ ನಂಬಿಕೆ ಇದೆ. ಅವರು ವೇಷ ಹಾಕಿದ ನಂತರ ದೈವಗಳಾಗಿ ನಡೆದುಕೊಳ್ಳುತ್ತಾರೆಯೇ ಹೊರತು ಪಾತ್ರಿಗಳಾಗಿ ಅಲ್ಲ” ಎಂದೆ.

“ ಆದರೆ ಕಾಂತಾರ ಚಿತ್ರದಲ್ಲಿ ದೈವ ನರ್ತಕ ತಮ್ಮ ಪರಿವಾರದ ಭೂಮಿಯ ರಕ್ಷಣೆಗಾಗಿ ಗುಳಿಗ ಭೂತದ ಆವಾಹನೆಯಲ್ಲಿ ಸೇಡು ತೀರಿಸಿಕೊಳ್ಳುವ ಘಟನೆ ಇದೆ ಇದು ಕೂಡಾ ಆ ಜನಾಂಗಕ್ಕೆ ಮಾಡಿರುವ ಅಪಚಾರ ಅಲ್ಲವೇ” ಎಂದು ನನ್ನ ಗೆಳೆಯ ಪ್ರಶ್ನಿಸಿದ. ಆತನೇ ಮುಂದುವರಿದು  “ ಕಂಬಳವನ್ನು ಜಂಟಲ್ ಮೆನ್ ಗೇಮ್ ಎನ್ನುತ್ತೀರಾ? ಕಾಂತಾರ ಚಿತ್ರದಲ್ಲಿ ವಂಚನೆ, ಹೊಡೆದಾಟ ಇದೆಯಲ್ಲ ಎಂದು ನಾಲ್ಕನೆಯ ಪ್ರಶ್ನೆ ಹಾಕಿದ.

“ ಕಂಬಳದ ಜೊತೆ ಕೆಲವೊಂದು ಮೂಡನಂಬಿಕೆಗಳು ಥಳಕು ಹಾಕಿರುವುದು ಮತ್ತು ಅದು ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿರುವುದು ನಿಜವಾದರೂ ಅದು ಈಗಲೂ ಜಂಟಲ್ ಮೆನ್ ಗೇಮ್. ಈಗಿನ ರೀತಿಯಲ್ಲಿ ಓಟದ ಸಮಯ ಅಳೆಯಲು ವೈಜ್ಞಾನಿಕವಾದ ವ್ಯವಸ್ಥೆ ಇಲ್ಲದಿದ್ದಾಗಲೂ ಮೋಸ-ವಂಚನೆಗಳು ನಡೆದಿರುವುದು ಮತ್ತು ಅದಕ್ಕಾಗಿ ಹೊಡೆದಾಟಗಳು ನಡೆದದ್ದು ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲವೇ ಇಲ್ಲ ಎಂದು ಹೇಳಬಹುದು”’ ಎಂದೆ. 

“ಹಾಗಿದ್ದರೆ ಇದು ಕಂಬಳ ಕ್ರೀಡೆಯಲ್ಲಿನ ಜಗಳ/ಹೊಡೆದಾಟವೆಲ್ಲ  ಅಪಚಾರ ಅಲ್ಲವೇ?”” ಎಂದು ಗೆಳೆಯ ಕೇಳಿದ.ಭೂ ಸುಧಾರಣೆಯ ಫಲಾನುಭವಿಯೂ ಆಗಿರುವ ಗೆಳೆಯ ಕೇಳಿದ   ಕೊನೆಯ ಪ್ರಶ್ನೆ ಜೊತೆ ಉತ್ತರವನ್ನೂ ಹೇಳಿದ್ದ:“  ನೋಡು ಮಾರಾಯ ನೀನು ಏನೇ ಹೇಳು, ನಮ್ಮೂರಿನ ಭೂಮಾಲೀಕರು, ಉತ್ತರಪ್ರದೇಶ-ಬಿಹಾರದವರ ರೀತಿ ಗುಡಿಸಲುಗಳ ಮುಂದೆ ಕಾಲು ಮೇಲೆ ಕಾಲು ಹಾಕಿ ಒಕ್ಕಲಿನ ಮನೆಗಳಿಗೆ ಬೆಂಕಿ ಹಚ್ಚುವವರಲ್ಲ, ಅದೂ ಒಂದು ಮಗುವಿಗೂ ಬಂದೂಕಿನಿಂದ ಗುಂಡು ಹಾರಿಸಿ ಕೊಲ್ಲುವಷ್ಟು ನಿರ್ದಯರಲ್ಲವಲ್ಲಾ’ ಎಂದು ಹೇಳಿದ.

“” ಹೌದು,  ಜಮೀನಿಗೆ ಸಿಕ್ಕಾಪಟ್ಟೆ ಬೆಲೆ ಬಂದಿರುವ ಈ ಕಾಲದಲ್ಲಿ ಭೂಸುಧಾರಣೆ ಜಾರಿಗೆ ತಂದಿದ್ದರೆ ಸ್ವಲ್ಪ ರಕ್ತಪಾತವಾಗುತ್ತಿತ್ತೋ ಏನೋ? ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶೇಕಡಾ 90ರಷ್ಟು ಧಣಿಗಳು ಬೇರೆ ಜಿಲ್ಲೆಗಳ ಧಣಿಗಳಂತೆ ಭೂ ಸುಧಾರಣೆ ಕಾಯ್ದೆಯ ಕಣ್ಣಿಗೆ ಮಣ್ಣೆರೆಚಿ ನೂರಾರು ಎಕರೆ ಭೂಮಿ ಉಳಿಸಿಕೊಂಡವರಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 70-80ರಷ್ಟು ಭೂ ಸುಧಾರಣೆ ಜಾರಿಗೆ ಬಂದಿದೆ. 

ಭೂಮಾಲೀಕರು ಒಂದು ಹಸುಳೆಯನ್ನು ಕೊಲ್ಲುವಷ್ಟು ಕ್ರೂರಿಗಳಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಚಿತ್ರದಲ್ಲಿ ಧಣಿಗಳ ಜಾತಿಯನ್ನು ನೇರವಾಗಿ ಹೇಳದೆ ಇದ್ದರೂ ಆ ಧಣಿ ಬಂಟ ಸಮುದಾಯದವರು ಎಂದು ಊಹಿಸಿಕೊಳ್ಳಬಹುದು. ದಕ್ಷಿಣ ಕನ್ನಡದ ಬಹುತೇಕ ಜಮೀನ್ದಾರರು ಬಂಟ,ಬ್ರಾಹ್ಮಣ ಮತ್ತು ಜೈನರು. 

ಇವರಲ್ಲಿ ಬಂಟರು ಮಾತ್ರ ಮಾಂಸಹಾರಿಗಳು. ಚಿತ್ರದ ಧಣಿ ಕೋಳಿ-ಹಂದಿಪ್ರಿಯನಾದ ಕಾರಣ ಆತ ಬಂಟ ಜಾತಿಯವನೆಂದು ಹೇಳಬಹುದು ಎಂದು ಹೇಳಿದೆ.(ಹಾಗಿದ್ದರೆ ಇದು ಬಂಟ ಸಮಾಜಕ್ಕೆ ಮಾಡಿರುವ ಅಪಚಾರ ಅಲ್ವೇ? ಎನ್ನುವುದು ನನ್ನ ಗೆಳೆಯನ ಪ್ರಶ್ನೆ.ಈ  ಪ್ರಶ್ನೆಗಳಿಗೆ  ತಿಳಿದಮಟ್ಟಿಗೆ ನಾನು ಉತ್ತರಿಸಿದ್ದೇನೆ. ಉಳಿದಂತೆ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಉತ್ತರಿಸಬೇಕು

ಹೆಡ್ ಬುಷ್ ನಲ್ಲಿನ ವೀರಗಾಸೆಯ ಬಗೆಗಿನ ವಿವಾದಕ್ಕೆ ಪ್ರತಿಕ್ರಿಯಿಸುತ್ತಾ ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕೃತಿಗೆ ಅವಮಾನವಾಗದಂತೆ ನೋಡಿಕೊಳ‍್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿರುವ ಸುನೀಲ್ ಕುಮಾರ್ ಅವರೇ, ಕಾಂತಾರ ಚಿತ್ರದಲ್ಲಿಯೂ ತುಳುನಾಡಿನ ಜಾನಪದಕ್ಕೆ ಮಾತ್ರವಲ್ಲ ದೈವಗಳಿಗೂ ಅವಮಾನವಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಚಿತ್ರ ನಿರ್ಮಾಪಕ-ನಿರ್ದೇಶಕರಿಗೂ ಮರು ಚಿಂತನೆ ನಡೆಸಲು ಕರೆ ನೀಡುತ್ತೀರಾ?- ದಿನೇಶ್ ಅಮಿನ್ ಮಟ್ಟು

ಬಾತ್ ಟವೆಲ್ ಉಟ್ಟು ಕಾಲೇಜಿಗೆ ಹೋಗುವ ವಿದ್ಯಾರ್ಥಿ !!

  19 ವರ್ಷ ಪ್ರಾಯದ ಈ ಭೂಪನಿಗೆ ಡ್ರೆಸ್ ಅಂದರೆ ಆಗದು. ಎಷ್ಟೆಂದರೆ, ಯಾರಾದರೂ ಧರಿಕೊಳ್ಳು ಅಂತ ಒತ್ತಾಯ ಮಾಡಿ ಡ್ರೆಸ್ ಗ್ರಿಸ್ ಕೊಟ್ಟರೆ ಅದನ್ನು ಹರಿದು ಚಿಂದಿ ಮಾಡಿ ಹಾಕುತ್ತಾನೆ.

 ಆದರೆ, ಕಾಲೇಜಿಗೆ ಹೋಗಬೇಕಲ್ಲ, ಹೌದು, ಬಿಎ ಕಲಿಯಲು ಕಾಲೇಜಿಗೆ ಹೋಗುತ್ತಾನೆ, ಕಾಲೇಜಿಗೆ ಹೋಗುವಾಗ ಅಂಡರ್ ವೇರ್ ಮತ್ತು ಅದರ ಮೇಲೆ ಒಂದು ಬಾತ್ ಟವೆಲ್ ಹೊದ್ದುಕೊಂಡು ಹೋಗುತ್ತಾನೆ. ಮಧ್ಯಪ್ರದೇಶದ ಪಿಚ್ಚೋಡಿ ಹಳ್ಳಿಯ ಬುಡಕಟ್ಟು ಸಮುದಾಯಕ್ಕೆ ಸೇರಿದ ಕಣ್ಣಯ್ಯ ಅಭಾಶಿಗೆ ಚಿಕ್ಕಂದಿನಿಂದಲೂ ಬಟ್ಟೆ ಅಂದರೆ ಆಗದು. 

ಇಷ್ಟು ವರ್ಷಗಳ ಕಾಲ ಅವನ ಬಡ ತಾಯಿ ಅವನಿಗೆ ಬಟ್ಟೆ ಹಾಕಲು ಶತಾಯಗತಾಯ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆದರೆ, ಅವನನ್ನು ವಿದ್ಯಾವಂತನಾಗಿ ಮಾಡಲು ಪಣ ತೊಟ್ಟ ಆಕೆ ಶಾಲೆಯ ಶಿಕ್ಷಕರು, ಅಧಿಕಾರಿಗಳಳ ಕೈಕಾಲು ಹಿಡಿದು, ಹೇಗೋ 12ನೇ ತರಗತಿ ತನಕ ಅಂಡರ್ ವೇರಲ್ಲಿ ಅವನನ್ನು ಶಾಲೆಗೆ ಕಳಿಸಿ, ಓದಿಸುವಲ್ಲಿ ಸಫಲಳಾದಳು. 

ಆದರೆ, ಡಿಗ್ರಿ ಮಾಡಲು ಕಾಲೇಜಿಗೆ ಸೇರಿಸುವ ಸಮಯದಲ್ಲಿ ಕಣ್ಣಯ್ಯನ ಆ ವಿಚಿತ್ರ ನಡವಳಿಕೆಯಿಂದಾಗಿ ಸಮಸ್ಯೆ ಎದುರಾಯಿತು. ಕಣ್ಣಯ್ಯ ಓದಿನಲ್ಲಿ ತುಂಬಾ ಹುಷಾರಿದ್ದಾನೆ. ಅವನ ಕೈಬರಹವೂ ಬಹು ಸುಂದರ. ಅಂತೆಯೇ ಅವನ ನಡವಳಿಕೆ ಕೂಡಾ. ಪಾಠೇತರ ಚಟುವಟಿಕೆಗಳಲ್ಲೂ ಮುಂದಿದ್ದಾನೆ. ಹೀಗಾಗಿ ಶಿಕ್ಷಕರಿಗೆ ಅವನು ಅಚ್ಚುಮೆಚ್ಚಿನ ಶಿಷ್ಯನಾಗಿರುವುದರಿಂದ ಅವರೆಲ್ಲ ಸೇರಿ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡು, ಅವನನ್ನು ಒಂದು ಸ್ಪೆಷಲ್ ಕೇಸಾಗಿ ಪರಿಗಣಿಸಿ ಕಾಲೇಜಿಗೆ ಸೇರಿಸಿಕೊಳ್ಳಲು ಒಪ್ಪಿಸಿದರು. ಕಣ್ನಯ್ಯ ಈಗ ಎರಡನೇ ವರ್ಷದ ಬಿಎ ಮಾಡುತ್ತಿದ್ದಾನೆ. ಪ್ರತೀದಿನ ಚಪ್ಪಲಿ, ಬ್ಯಾಕ್ ಪ್ಯಾಕ್, ಅಂಡರ್ ವೇರ್ ಮತ್ತು ಬಾತ್ ಟವಲಲ್ಲಿ ಕಾಲೇಜಿಗೆ ಹೋಗಿ ಬರುತ್ತಾನೆ. ಶಿಕ್ಷಕರಂತೆ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರೂ ಅವನನ್ನು ಒಪ್ಪಿಕೊಂಡಿದ್ದಾರೆ

(


G.T.satish ವಾಲ್ ನಿಂದ ).Panju Ganguli

ಅಪ್ಪು ಚಿತ್ರ ಗಂಧದ ಗುಡಿಯ ಪ್ರಚಾರಕ್ಕೆ ಇಳಿದ ಕಾಫಿನಾಡು ಚಂದು


  ಚಿಕ್ಕಮಗಳೂರು : ಅಪ್ಪು ಅಭಿನಯದ ಗಂಧದಗುಡಿ ಚಿತ್ರದ ಪ್ರಚಾರಕ್ಕೆ  ಕಾಫಿನಾಡ ಚಂದು ಇಳಿದಿದ್ದಾನೆ .ತಲೆಯಲ್ಲಿ ಗಂಧದ ಗುಡಿ ಹೆಸರು ಹಾಕಿಸಿಕೊಂಡು  ಚಿಕ್ಕಮಗಳೂರು ನಗರದಲ್ಲಿ ಪ್ರಚಾರ ಮಾಡುತ್ತಿದ್ದಾನೆ  ಪುನೀತ್ ಅಣ್ಣನ ಸಿನಿಮಾ ಎತ್ತರಕ್ಕೆ ಬೆಳೆಯಲಿ ಎಂದು ಮನವಿ     ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ವಿಶ್ ಮೂಲಕ  ಹೆಸರಾಗಿರೋ ಚಂದುತನ್ನ ವಿಭಿನ್ನ ಶೈಲಿಯಲ್ಲಿ ಪ್ರಚಾರಕ್ಕೆ ಇಳಿದು ಗಮನ ಸೆಳೆದಿದ್ದಾನೆ 

ಬುಧವಾರ, ಅಕ್ಟೋಬರ್ 26, 2022

ಪೌರಕಾರ್ಮಿಕರ ಪಾದ ಪೂಜೆ ;ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಿಸಿದ ಶಾಸಕ ಸಿ. ಟಿ. ರವಿ

 


ಚಿಕ್ಕಮಗಳೂರು : ಅತ್ತ ಪ್ರಧಾನಿ ನರೇಂದ್ರ ಮೋದಿ  ಸೈನಿಕರೊಂದಿಗೆ ದೀಪಾವಳಿ ಆಚರಿಸಿದರೆ ಇತ್ತ ಶಾಸಕ      ಸಿ. ಟಿ. ರವಿ ಪೌರಕಾರ್ಮಿಕರೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು .

ಪೌರ ಕಾರ್ಮಿಕರ ಬಡಾವಣೆಗೆ ತೆರಳಿ ,ಹಿರಿಯ ಕಾರ್ಮಿಕರಿಗೆ ಆರತಿ ಎತ್ತಿ ಪಾದಪೂಜೆ ಮಾಡಿ,ಹೂವಿನ ಹಾರ ಹಾಕಿ  ಗೌರವ ಸಲ್ಲಿಸಿದರು . ಶಾಸಕರ ವಿಶಿಷ್ಟ ರೀತಿಯ ದೀಪಾವಳಿ ಆಚರಣೆಗೆ ಪೌರಕಾರ್ಮಿಕರು ಮನಸೋತರು.

ಪೌರಕಾರ್ಮಿಕರ ಮಕ್ಕಳೊಂದಿಗೆ ಬೆರೆತು ಪಟಾಕಿ ಸಿಡಿಸಿದರು .ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ,ಸಿಡಿಎ ಅಧ್ಯಕ್ಷ ಆನಂದ್ ,ಪೌರಾಯುಕ್ತ ಬಸವರಾಜ್ ,ನಗರಸಭೆ ಮಾಜಿ ಅಧ್ಯಕ್ಷೆ ಕವಿತಾ ಶೇಖರ್ ,ತಮ್ಮಯ್ಯ  ಇತರರು ಜತೆಗೂಡಿದ್ದರು .

ಸೋಮವಾರ, ಅಕ್ಟೋಬರ್ 24, 2022

ಸಂಭ್ರಮಕ್ಕೆ ಸಾಕ್ಷಿಯಾಯಿತು ದೇವಿರಮ್ಮ ಬೆಟ್ಟ ; ಸಾವಿರಾರು ಭಕ್ತರಿಂದ ದೇವಿಯ ದರ್ಶನ

 


ಚಿಕ್ಕಮಗಳೂರು : ಜಿಲ್ಲೆಯ ಶಕ್ತಿ ದೇವತೆಗಳಲ್ಲಿ ಒಂದಾದ ಮಲ್ಲೇನಹಳ್ಳಿಯ ದೇವಿರಮ್ಮ ಬೆಟ್ಟ  ಸಂಭ್ರಮಕ್ಕೆ ಸಾಕ್ಷಿಯಾಯಿತು .

ಸಾವಿರಾರು ಭಕ್ತರು ತಂಡೋಪತಂಡವಾಗಿ ಬೆಟ್ಟಕ್ಕೆ ಲಗ್ಗೆ ಇಟ್ಟರು .ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಭಕ್ತರು ಸೂರ್ಯೋದಯಕ್ಕೆ ಮುನ್ನವೇ ಕಡಿದಾದ ಹಾದಿಯಲ್ಲಿ  ಬೆಟ್ಟ ಏರತೊಡಗಿದರು.

ಕರೋನ ಹಿನ್ನಲೆಯಲ್ಲಿ ಕಳೆದ 2ವರ್ಷಗಳಿಂದ   ದೇವಿರಮ್ಮ ಬೆಟ್ಟಕ್ಕೆ ಭಕ್ತರು  ಏರುವುದನ್ನು ನಿರ್ಬಂಧಿಸಲಾಗಿತ್ತು . ಈ ವರ್ಷ ಎಲ್ಲವೂ ಮುಕ್ತ ಮುಕ್ತ . 

ಬೆಟ್ಟವೇರಿ ದೇವಿಯ ದರ್ಶನ ಪಡೆದು  ಪ್ರಕೃತಿ ಸೌಂದರ್ಯ ಆಹ್ಲಾದಿಸಿ ಹಿಂದಿರುಗಿದರು .ಪುನೀತ್ ಭಾವಚಿತ್ರ ಇದ್ದ ಬಾವುಟದೊಂದಿಗೆ ಆಗಮಿಸಿದ ಪುನೀತ್ ಅಭಿಮಾನಿಗಳು ಎಲ್ಲರ ಗಮನ ಸೆಳೆದರು .

ಪ್ರಕೃತಿಯು ಭಕ್ತರ ಆಶಯಕ್ಕೆ ತಣ್ಣೀರು ಎರಚಲಿಲ್ಲ .ಬೆಟ್ಟ ಪೂರ್ತಿ ಭಕ್ತರಿಂದ ಗಿಜಿಗುಡುತ್ತಿತ್ತು .ಜಿಲ್ಲಾಡಳಿತ ಅಗತ್ಯ ಬಂದೋಬಸ್ತ್ ಮಾಡಿತ್ತು 


ಶನಿವಾರ, ಅಕ್ಟೋಬರ್ 22, 2022

ಸರ್ಕಾರಿ ಶಾಲೆಗಳಲ್ಲಿ ಪೋಷಕರಿಂದ ದೇಣಿಗೆ ಸಂಗ್ರಹದ ಸುತ್ತೋಲೆ: ಸಿಪಿಐ ತೀವ್ರ ಟೀಕೆ

 ಚಿಕ್ಕಮಗಳೂರು :ಶಾಲೆಗಳಲ್ಲಿನ ಮೂಲ ಸೌಕರ್ಯಗಳನ್ನು ಒದಗಿಸಲು ಶಾಲಾ ಮಕ್ಕಳ ಪೋಷಕರಿಂದ ದೇಣಿಗೆ ಸಂಗ್ರಹಿಸುವ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆಯ ಕ್ರಮ ರಾಜ್ಯ ಸರ್ಕಾರ ಆರ್ಥಿಕ ದಿವಾಳಿತನ ಎದುರಿಸುತ್ತಿರುವುದರ ಸಂಕೇತವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಟೀಕಿಸಿದೆ .

 ಈ ಕೂಡಲೆ ದೇಣಿಗೆ ಸಂಗ್ರಹದ ಸುತ್ತೋಲೆ ಹಿಂಪಡೆಯಬೇಕೆಂದು  ಪಕ್ಷ (ಸಿಪಿಐ) ಆಗ್ರಹ ಪಡಿಸಿದ್ದು ಶಾಲಾ ಶಿಕ್ಷಣ ಮಕ್ಕಳ ಸಂವಿಧಾನ ಬದ್ಧ ಮೂಲಭೂತ ಹಕ್ಕಾಗಿದೆ.ಮಕ್ಕಳ ಕಲಿಕೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಾಗರೀಕ ಸರ್ಕಾರದ ಜವಾಬ್ದಾರಿ ಯಾಗಿದೆ. ಸುತ್ತೋಲೆ ಹಿಂಡೆಯದಿದ್ದರೆ   ರಾಜ್ಯಾದ್ಯಂತ ಚಳವಳಿ ರೂಪಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಪಕ್ಷದ  ರಾಜ್ಯ ಸಹ ಕಾರ್ಯದರ್ಶಿ ಅಮ್ಜದ್ ಎಚ್ಚರಿಸಿದ್ದಾರೆ 


ಕಾಡೂಗೊಲ್ಲರ ಸಂಘಟಿತ ಹೋರಾಟಕ್ಕೆ ಶಾಸಕರ ಬೆಂಬಲ

 ಚಿಕ್ಕಮಗಳೂರು-ಕಾಡುಗೊಲ್ಲರ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಬೇಕು ಎನ್ನುವ ಬೇಡಿಕೆಗೆ ತಮ್ಮ ಸಂಪೂರ್ಣ ಬೆಂಬಲವಿದ್ದು,ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಶಾಸಕ ಸಿ.ಟಿ.ರವಿ ಕರೆ ನೀಡಿದರು. ಕಾಡೂಗೊಲ್ಲರ  ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಸಖರಾಯಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. . 

ಎಸ್‌ಟಿ ಸಮುದಾಯಕ್ಕೆ ಸೇರ್ಪಡೆಗೊಳಿಸುವ  ಹೋರಾಟದಲ್ಲಿ  ಗುರಿ ಮುಟ್ಟಿಸುವವರೆಗೆ ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.  


 ಶಾಸಕ ಬೆಳ್ಳಿ ಪ್ರಕಾಶ್  ಕಾಡುಗೊಲ್ಲರ ಬೇಡಿಕೆ ಈಡೇರಿಕೆಗೆ ಶ್ರಮಿಸುತ್ತೇನೆ ಎಂದು ಭರವಸೆ ಕೊಟ್ಟರು