udayanews

ಶನಿವಾರ, ಅಕ್ಟೋಬರ್ 29, 2022

ಕ್ಯಾನ್ಸರ್ ; ಮುಕ್ತ ಚರ್ಚೆ ಅಗತ್ಯ : ಡಾ.ಮಂಜುನಾಥ್

 ಚಿಕ್ಕಮಗಳೂರು:- ಕ್ಯಾನ್ಸರ್  ಬಗ್ಗೆ ವೈದ್ಯರೊಂದಿಗೆ  ಮುಕ್ತವಾಗಿ ಚರ್ಚಿಸಿ   ಪರಿಹಾರ ಕಂಡುಕೊಳ್ಳುವಂತೆ  ಜಿಲ್ಲಾ ವಿಚಕ್ಷಣಾಧಿಕಾರಿ ಡಾ. ಹೆಚ್.ಕೆ.ಮಂಜುನಾಥ್ ಹೇಳಿದರು.    ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಬೆಂಗಳೂರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ  ಕ್ಯಾನ್ಸರ್ ಮತ್ತು ಆರೋಗ್ಯ ತಪಾಸಣಾ ಶಿಬಿರದಲ್ಲಿ  ಭಾಗವಹಿಸಿ  ಮಾತನಾಡಿದರು.      ಅಧ್ಯಕ್ಷತೆಯನ್ನು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಆರ್.ಶ್ರೀನಿವಾಸ್ ವಹಿಸಿದ್ದರು. ಕಿದ್ವಾಯಿ ಆಸ್ಪತ್ರೆಯ ವೈದ್ಯರಾದ ಡಾ .ಮಹಾಂತೇಶ್, ವಿಘ್ನೇಶ್  ತಪಾಸಣೆ ನಡೆಸಿದರು. ಸಂಸ್ಥೆಯ ಉಪಾಧ್ಯಕ್ಷ ಪ್ರದೀಪ್‌ಗೌಡ, ಆರೋಗ್ಯ ಸಮಿತಿ ಅಧ್ಯಕ್ಷ ಡಾ .ಕೆ.ಸುಂದರಗೌಡ,  ನಿರ್ದೇಶಕರಾದ ರಸೂಲ್‌ಖಾನ್, ಕೋಟೆ ಸೋಮಣ್ಣ, ಪವನ್, ಲಿಖಿತ್, ವಿನಾಯಕ್, ಬ್ರಹ್ಮಕುಮಾರಿ  ಭಾಗ್ಯಕ್ಕ   ಹಾಜರಿದ್ದರು.                      

ನಟ ಪುನೀತ್‌ರಾಜ್‌ಕುಮಾರ್ ಗೆ ಪುಷ್ಪನಮನ    ಚಿಕ್ಕಮಗಳೂರು :- ನಟ ಪುನೀತ್‌ರಾಜ್‌ಕುಮಾರ್  ಮೃತರಾಗಿ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಜಿಲ್ಲಾ ಡಾ| ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಆಜಾದ್‌ಪಾರ್ಕ್ ವೃತ್ತದಲ್ಲಿ ಪುನೀತ್ ಭಾವಚಿತ್ರಕ್ಕೆ ಶಾಲಾ ಮಕ್ಕಳೊಂದಿಗೆ ಪುಷ್ಪನಮನ ಸಲ್ಲಿಸಲಾಯಿತು.

 ಸಂಘದ ಜಿಲ್ಲಾಧ್ಯಕ್ಷ ಐ.ಕೆ.ಓಂಕಾರೇಗೌಡ  , ಸಂಘದ ಗೌರವಾಧ್ಯಕ್ಷ ಎಲ್.ವಿ.ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ವ್ಯವಸ್ಥಾಪಕ ಲೋಕೇಗೌಡ, ಆಜಾದ್‌ಪಾರ್ಕ್ ಶಾಲೆ ಶಿಕ್ಷಕ ಲೋಕೇಶ್ವರಾಚಾರ್ ಹಾಗೂ ಶಾಲಾಮಕ್ಕಳು ಉಪಸ್ಥಿತರಿದ್ದರು.        



ಸಮುದಾಯ ಭವನ  -ಗುಣಮಟ್ಟಕ್ಕೆ ಮೆಚ್ಚುಗೆ         
ಚಿಕ್ಕಮಗಳೂರು: ರಾಜ್ಯ ಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಡಿಯಲ್ಲಿ ಹಿರೇಮಗಳೂರು ವ್ಯಾಪ್ತಿಯ ಲಕ್ಷ್ಮಿ ಪುರದ ಗೌರೇಶ್ವರ ಸಮುದಾಯ ಭವನದ ಮೇಲಂತಸ್ತಿನ ಕಾಮಗಾರಿ ಗುಣಮಟ್ಟ ವೀಕ್ಷಿಸಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.            ನಗರಸಭೆ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾಹಿತಿ ನೀಡಿ,  ಶಾಸಕಿಯಾಗಿದ್ದ ಎ.ವಿ.ಗಾಯತ್ರಿ ಶಾಂತೇಗೌಡ ೩ ಲಕ್ಷ ರೂ. ವಿಧಾನ ಪರಿಷತ್ ಶಾಸಕ  ಗೋವಿಂದರಾಜು ೩ ಲಕ್ಷ ರೂ  ಶಾಸಕ ಸಿ.ಟಿ.ರವಿ  ೨ ಲಕ್ಷ ರೂ  ರಾಜ್ಯಸಭಾ ಸದಸ್ಯ ರೇಹಮಾನ್ ಖಾನ್  ೩ ಲಕ್ಷ ರೂ. ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಗಡೆ  ೧ ಲಕ್ಷ ರೂ.ಅನುದಾನ ನೀಡಿದ್ದಾರೆಂದರು .          

  

ಶುಕ್ರವಾರ, ಅಕ್ಟೋಬರ್ 28, 2022

ಜನವರಿ ೧೮ರಿಂದ ೨೨ವರೆಗೆ ಚಿಕ್ಕಮಗಳೂರು ಜಿಲ್ಲಾ ಉತ್ಸವ:

 ಚಿಕ್ಕಮಗಳೂರು : ಜನವರಿ ೧೮ರಿಂದ ೨೨ವರೆಗೆ ೪ ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲಾ  ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತದೆ. ಎಲ್ಲರೂ ಕೈಜೋಡಿಸಿ, ಒಗ್ಗಟ್ಟಾಗಿ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಹೇಳಿದ್ದಾರೆ.


ಉತ್ಸವದ ಹಿನ್ನೆಲೆಯಲ್ಲಿ ಶಾಸಕ ಸಿ ಟಿ ರವಿ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು .


ಕೆಂಪೇಗೌಡ ಪ್ರತಿಮೆಗೆ ಮೃತ್ತಿಕೆ ಸಂಗ್ರಹ                      

ಚಿಕ್ಕಮಗಳೂರು,  ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆಗೆ ಪ್ರತೀ ಜಿಲ್ಲೆಯಿಂದ ಮೃತ್ತಿಕೆ ಸಂಗ್ರಹಿಸುವ ಅಭಿಯಾನಕ್ಕೆ ಜಿಲ್ಲೆಯಲ್ಲಿ  ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಚಾಲನೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ  ನ.೧೧ರಂದು ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಸರ್ಕಾರವು ಪ್ರತಿ ಜಿಲ್ಲೆಯ ಪ್ರತಿ ಗ್ರಾಮಗಳಿಂದ ಮಣ್ಣು ಸಂಗ್ರಹ ಅಭಿಯಾನವನ್ನು ಕೈಗೊಂಡಿದ್ದು, ಪ್ರತಿ ಜಿಲ್ಲೆಗೆ ತೆರಳಿ ಮಣ್ಣು ಸಂಗ್ರಹ ಮಾಡಲಾಗುತ್ತದೆ ಎಂದು ತಿಳಿಸಿದರು.


ಬೀರಲಿಂಗೇಶ್ವರ ಸಮುದಾಯ ಭವನ ಉದ್ಘಾಟನೆ




ಚಿಕ್ಕಮಗಳೂರು :  ಕಡೂರು ತಾಲ್ಲೂಕು ನಿಡಘಟ್ಟ ಗ್ರಾಮದಲ್ಲಿ ನಿರ್ಮಿಸಲಾದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನವನ್ನು  ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ(ಬೈರತಿ) ಉದ್ಘಾಟನೆಗೊಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವ ಯಾವ 
ಕಾಗಿನೆಲೆ ಕನಕ ಗುರು ಪೀಠದ ಪೀಠಾಧ್ಯಕ್ಷ ನಿರಂಜನಾನಂದಪುರಿ ಮಹಾಸ್ವಾಮಿ . ನಿಡಘಟ್ಟ ಶ್ರೀ ಬೀರಲಿಂಗೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಎನ್.ಆರ್.ರೇಣುಕಮೂರ್ತಿ ,
 ಶಾಸಕ ಸಿ.ಟಿ.ರವಿ, ಮಾಜಿ ವಿಧಾನ ಪರಿಷತ್ ಸದಸ್ಯೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಿ.ಗಾಯತ್ರಿ ಶಾಂತೇಗೌಡ, ಮಾಜಿ ಸಚಿವ ಎಚ್.ಎಂ.ರೇವಣ್ಣ, ನಿಡಘಟ್ಟ ಶ್ರೀ ಬೀರಲಿಂಗೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿ ಎನ್.ಕೆ.ನಂಜುಂಡಪ್ಪ  ಉಪಸ್ಥಿತರಿದ್ದರು.





ಕೋಟಿಕಂಠ ಗಾಯನಕ್ಕೆ ಧ್ವನಿಯಾದ ವಿದ್ಯಾರ್ಥಿಗಳು ;ಉಸ್ತುವಾರಿ ಸಚಿವರು ಭಾಗಿ - ಶಾಸಕ ಸಿ ಟಿ ರವಿ ಸ್ಟೆಪ್ಸ್

 


ಚಿಕ್ಕಮಗಳೂರು: ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಕೋಟಿ ಕಂಠ ಕನ್ನಡ ಗಾಯನಕ್ಕೆ ಜಿಲ್ಲಾ ಕೇಂದ್ರ ಚಿಕ್ಕಮಗಳೂರು ಇಂದು ಸಾಕ್ಷಿಯಾಯಿತು .

ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಕನ್ನಡದ 6 ಹಾಡುಗಳನ್ನು ಸಾಮೂಹಿಕವಾಗಿ  ಹಾಡಿ ಮನಸೂರೆಗೊಂಡರು .

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಇತರರು ಪಾಲ್ಗೊಂಡಿದ್ದರು .ಹುಟ್ಟಿದರೆ ಕನ್ನಡ ನಾಡು ಹಾಡಿಗೆ ಶಾಸಕ ಸಿ ಟಿ ರವಿ ಇತರರು ಸ್ಟೆಪ್ಸ್ ಹಾಕಿದರು 

ದಲಿತರ ಮೇಲೆ ದೌರ್ಜನ್ಯ : ಕಾಫಿ ತೋಟದ ಮಾಲಿಕನ ಬಂಧನಕ್ಕೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ

 


ಚಿಕ್ಕಮಗಳೂರು :ತಾಲ್ಲೂಕು ಹುಣಸೆಹಳ್ಳಿ ಪುರದಲ್ಲಿ ತೋಟ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿ ಮಹಿಳೆಯೊಬ್ಬರ ಗರ್ಭಪಾತಕ್ಕೆ ಕಾರಣವಾಗಿರುವ ತೋಟದ ಮಾಲೀಕ ಮತ್ತು ಆತನ ಪುತ್ರನನ್ನು ಬಂಧಿಸುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳ ಮುಖಂಡರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

ಘಟನೆ ನಡೆದು 15 ದಿನಗಳು ಕಳೆದರೂ ಈವರೆಗೂ ತೋಟದ ಮಾಲೀಕ ಜಗದೀಶ ಗೌಡ ಮತ್ತು ತಿಲಕ್ ಗೌಡನನ್ನು ಬಂಧಿಸಿಲ್ಲವೆಂದು ಮುಷ್ಕರ ನಿರತರು ಆರೋಪಿಸಿದ್ದಾರೆ .

ತೋಟ ಕಾರ್ಮಿಕರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿರುವ ಬಾಳೆಹೊನ್ನೂರು  ಪೊಲೀಸರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳದಿರುವ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ .

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದ್ದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಿದ್ದಾರೆ.

ಆರೋಪಿ ಬಿಜೆಪಿ ಮುಖಂಡ ನಾಗಿದ್ದು ಪ್ರಕರಣವನ್ನು ಮುಚ್ಚಿಹಾಕುವ ವ್ಯವಸ್ಥಿತ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ .

ದಂಟರಮಕ್ಕಿ ಶ್ರೀನಿವಾಸ್, ಹೊನ್ನೇಶ್, ಗಿರೀಶ, ಅಂಗಡಿ ಚಂದ್ರು ,ಕೂದುವಳ್ಳಿ ಮಂಜುನಾಥ್,ಗೌಸ್ ಮುನೀರ್  ಸೇರಿದಂತೆ ಹಲವರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ .

ಕುಗ್ರಾಮಕ್ಕೆ 47ಲಕ್ಷ ರೂ. ಅನುದಾನ ;ಶಾಸಕರಿಗೆ ಕರಡಿ ಕುಣಿತದ ಮೂಲಕ ಸ್ವಾಗತ

ಕೊಪ್ಪ: ತಾಲ್ಲೂಕಿನ ಮೇಗುಂದಾ ಹೋಬಳಿಯ ಗುಡ್ಡೇತೋಟ ಗ್ರಾಮ ಪಂಚಾಯತಿ ಯಡಗುಂದ  ಗ್ರಾಮಕ್ಕೆ  ವಿವಿಧ  ಅಭಿವೃದ್ಧಿ ಗೆ ಸುಮಾರು 47 ಲಕ್ಷ ರೂ . ಅನುದಾನ ಮಂಜೂರು ಮಾಡಲಾಗಿದೆ .

ಯಡಗುಂದ , ಗೋಳುಗೋಡು ಅಂಗನವಾಡಿಗೆ ತಲಾ 12ಲಕ್ಷ  ಕಾರೋಳಿ ರಸ್ತೆಗೆ  8 ಲಕ್ಷ ರೂ ಮಂಜೂರು ಮಾಡಿದ್ದು ಕಾಮಗಾರಿಗಳ ಗುದ್ದಲೀ ಪೂಜೆಗೆ ಆಗಮಿಸಿದ  ಶಾಸಕ ಟಿ .ಡಿ. ರಾಜೇಗೌಡರನ್ನು   ಕರಡಿ ಕುಣಿತ , ಹಳ್ಳಿ ವಾದ್ಯಗಳೊಂದಿಗೆ  ಅದ್ಧೂರಿಯಾಗಿ ಸ್ವಾಗತಿಸಿ ಸನ್ಮಾನಿಸಿ ಗೌರವಿಸಲಾಯಿತು.  


ಮೇಗುಂದಾ ಹೋಬಳಿಯ ಮುಖಂಡರು ಗಡ್ಡೇತೋಟ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಬೂತ್ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು

ದೊಡ್ಡವರ ಸಣ್ಣತನ ; ಪಾರ್ಕಿಂಗ್ ಶುಲ್ಕ ಕಟ್ಟಲು ಶೃಂಗೇರಿಯಲ್ಲಿ ಕಂದಾಯ ಸಚಿವರ ಪಿ ಎ. ಕಿರಿಕಿರಿ ಆಡಿಯೋ ವೈರಲ್


ಚಿಕ್ಕಮಗಳೂರು : ಸಾವಿರ ರೂ ಸಂಬಳ, ಓಡಾಡಲು ಸರ್ಕಾರಿ ವಾಹನ ,ಆ ನಡುವೆ ಒಂದಿಷ್ಟು ಗೋಲ್ಮಾಲ್ ವ್ಯವಹಾರ . ಹೀಗಿದ್ದರೂ ಪಾರ್ಕಿಂಗ್ -ಟೋಲ್ ಇತರೆ  ಶುಲ್ಕ ಕಟ್ಟಲು ತಕರಾರು . ಇದು ಕೆಲ ಉನ್ನತ ಹುದ್ದೆಗಳಲ್ಲಿ ಇರುವವರ ರೋಗ .

ಶೃಂಗೇರಿಯಲ್ಲಿ ಇಂಥಹದೇ ಘಟನೆ ನಡೆದಿದೆ .ಆತ ಕಂದಾಯ ಸಚಿವ ಆರ್. ಅಶೋಕ್ ರವರ ಆಪ್ತ ಸಹಾಯಕ ಹನುಮಂತ ರಾಜು.
ಶೃಂಗೇರಿ ಮಠಕ್ಕೆ ಬಂದಿದ್ದ ಈ ವ್ಯಕ್ತಿ ಗಾಂಧಿ ಮೈದಾನದ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದ್ದಾನೆ . ಶುಲ್ಕ 50 ರೂ.ನೀಡುವಂತೆ ಅಲ್ಲಿನ ವ್ಯಕ್ತಿ ತಿಳಿಸಿದ್ದಾನೆ .
ಆಗ ತನ್ನನ್ನು  ಪರಿಚಯಿಸಿಕೊಂಡ ಈ ವ್ಯಕ್ತಿ ಶುಲ್ಕ ಕೊಡುವ ಬದಲಾಗಿ ಯಾರಿಗೋ ಫೋನ್ ಮಾಡುವುದಾಗಿ ಹೇಳಿದ್ದಾನೆ.
ಇದಕ್ಕೆ ಒಪ್ಪದೆ ಶುಲ್ಕ  ಪಾವತಿಸುವಂತೆ ತಿಳಿಸಿದ್ದರೂ ಪಾವತಿಸದೆ ಹಾಗೇ ಹೋಗಿದ್ದಾನೆ ಈ ದೊಡ್ಡ ವ್ಯಕ್ತಿ  !! .ಈ ಘಟನೆಯ ಆಡಿಯೋ ಈಗ ವೈರಲ್ ಆಗಿದೆ .

ಗುರುವಾರ, ಅಕ್ಟೋಬರ್ 27, 2022

ಕಾಂತಾರ ಚಿತ್ರದಲ್ಲಿಯೂ ಜಾನಪದಕ್ಕೆ ಮಾತ್ರವಲ್ಲ ದೈವಗಳಿಗೂ ಅವಮಾನವಾಗಿದೆ ಎಂಬ ಆರೋಪಗಳಿವೆ :ಸಚಿವ ಸುನಿಲ್ ಕುಮಾರ್ ಗೆ ಅಮಿನ್ ಮಟ್ಟು ಪ್ರಶ್ನೆ

              ಹೆಡ್ ಬುಷ್ ಚಿತ್ರದಲ್ಲಿ  ನಮ್ಮ ಜನಪದ ಕಲೆಯಾದ ವೀರಗಾಸೆಗೆ ಅಪಮಾನವಾಗಿದೆ ಎಂಬ ಆರೋಪದ ಬಗ್ಗೆ ನಮ್ಮ   ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರು ವ್ಯಕ್ತಪಡಿಸಿದ ಕಾಳಜಿ ಅಭಿನಂದನಾರ್ಹ.ಸಚಿವರ ಟ್ವೀಟ್ ನೋಡಿಸಿನೆಮಾವನ್ನು ಸಿನೆಮಾವಾಗಿಯೇ ನೋಡಬೇಕು‌ ಎನ್ನುವ ನನ್ನ ಅಭಿಪ್ರಾಯವನ್ನು‌ ಪುನರ್ ಪರಿಶೀಲನೆಗೆ ಒಡ್ಡಿದ್ದೇನೆ.  'ಕಾಂತಾರ' ಚಿತ್ರ ನೋಡಿದ ಮುಂಬೈನ ನನ್ನ ಗೆಳೆಯನೊಬ್ಬ ಇತ್ತೀಚೆಗೆ ತನ್ನ ಮನಸ್ಸಲ್ಲಿ ಮೂಡಿರುವ ಪ್ರಶ್ನೆಗಳನ್ನು ನನ್ನಲ್ಲಿ ಹಂಚಿಕೊಂಡಿದ್ದ. ನನ್ನ ಅರಿವಿನ ಮಿತಿಯಲ್ಲಿ ಆ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೆ.ಆ ಪ್ರಶ್ನೋತ್ತರ ಇಲ್ಲಿದೆ:ಪಂಜುರ್ಲಿ-ಗುಳಿಗ ಭೂತಗಳು ಮನುಷ್ಯನ ಜೀವ ತೆಗೆಯುವಷ್ಟು ವಯಲೆಂಟ್ ಭೂತವೇ? ಎನ್ನುವುದು ಆ ಗೆಳೆಯನ ಮೊದಲ ಪ್ರಶ್ನೆ


.“  ಉಗ್ರಸ್ವರೂಪದ ಭೂತಗಳು ಇರುವುದು‌ ನಿಜ. ಆದರೆ  ನನಗೆ ತಿಳಿದ ಹಾಗೆ ದೈವ ಮೈಮೇಲೆ ಬಂದ ನಂತರ ಜೀವ ತೆಗೆದ ಉದಾಹರಣೆಗಳಿಲ್ಲ ಇಲ್ಲ ಎಂದೆ. ತಪ್ಪು ಮಾಡಿದವರು ಭೂತಗಳ ಭಯದಿಂದ ಸತ್ತ ಉದಾಹರಣೆಗಳಿವೆ.  ಪಂಜುರ್ಲಿ-ಗುಳಿಗ ಮಾತ್ರವಲ್ಲ ಸಾವಿರಕ್ಕೂ ಮಿಕ್ಕಿ ಭೂತಗಳಿವೆಯಲ್ಲಾ, ಅವು ಯಾವುದೂ ಕೂಡಾ ಭೂತದ ವೇಷದಲ್ಲಿದ್ದಾಗ ಮನುಷ್ಯನ ಕಿರುಬೆರಳಿಗೆ ಕೂಡಾ ಬೇನೆ ಮಾಡಿಲ್ಲ. ಪಾಡ್ದನಗಳಲ್ಲಿ ಹೇಳುವಂತೆ ಅದು ತಾಯಿ ರೀತಿ ಸಾಕುತ್ತಾ, ಮಾವನಂತೆ ರಕ್ಷಿಸುತ್ತಾ ಬಂದಿವೆಯೇ ಹೊರತು ಯಾರನ್ನೂ ಸಾಯಿಸಿಲ್ಲ” ಎಂದೆ.

“ಹಾಗಿದ್ದರೆ ಕಾಂತಾರ ಚಿತ್ರದಲ್ಲಿ ತೋರಿಸಿರುವುದು ದೈವಕ್ಕೆ ಮಾಡಿದ ಅಪಚಾರವಲ್ಲವೇ? ಎಂದು ಆತ ಕೇಳಿದ."ಭೂತ-ದೈವಗಳು ಕಟ್ಟು-ಕ್ರಮ ಇಲ್ಲದೆ ಇದ್ದಕ್ಕಿದ್ದ ಹಾಗೆ ಯಾರ ಮೈಮೇಲೆ ಆವಾಹನೆ ಬರುತ್ತಾ? ಎನ್ನುವುದು ಗೆಳೆಯನ ಎರಡನೇ ಪ್ರಶ್ನೆ.“ ಹಾಗೆಲ್ಲ ಎಲ್ಲರೂ ಭೂತ-ದೈವಗಳ ಪಾತ್ರಿಗಳಾಗಲು ಸಾಧ್ಯವಿಲ್ಲ. ಅವರಿಗೆ ಅಧಿಕೃತವಾಗಿ ಊರ ಸಮಸ್ತರು ಸೇರಿ ಎಣ್ಣೆಬೂಳ್ಯ ಕೊಡಬೇಕು. ಅದರ ನಂತರ ಅವನು ಕೋಲದ ಚಪ್ಪರದಡಿ ನಿಂತಾಗ ಮಧ್ಯಸ್ತಗಾರರು ದೈವದ ಇತಿಹಾಸವನ್ನು ಹೇಳಿ ಪಾತ್ರಿಯ ಮೈಮೇಲೆ ದೈವ ಬರುವಂತೆ ಎಲ್ಲರ ಜೊತೆ ಪ್ರಾರ್ಥಿಸುತ್ತಾರೆ. ಹಾಗೆ ಹೀಗೆ ಯಾರೋ ಬಿದ್ದಲ್ಲಿಂದ ಎದ್ದು ಭೂತ ಮೈಮೇಲೆ ಬಂದಿದೆ ಎಂದು ಹೇಳುವುದು ಸಂಪ್ರದಾಯಕ್ಕೆ ವಿರುದ್ದವಾಗಿರುವುದು. ಹಾಗೆ ಸಿಕ್ಕಸಿಕ್ಕವರ ಮೈಮೇಲೆ ಬರುವುದು ಸತ್ತು ಹೋದ ಸಂಬಂಧಿಕರ ಕುಲೆಗಳು ಮಾತ್ರ” ಎಂದೆ.ಹಾಗಿದ್ದರೆ   ಗಾಯಗೊಂಡು ಬಿದ್ದಿರುವ ಶಿವನ ಮೈಮೇಲೆ ಗುಳಿಗ ಬಂದಿರುವುದು ಅಪಚಾರ ಅಲ್ವಾ ಎಂದು ಗೆಳೆಯ ಕೇಳಿದ. ‘” ಭೂತ ಕಟ್ಟುವವರು ಎಂದಾದರೂ ವೇಷ ಹಾಕಿದ ನಂತರ ಸ್ವಾರ್ಥಿಗಳಾಗಿ ನಡೆದುಕೊಂಡದ್ದು, ಜನರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡಿದ್ದು ಇದೆಯೇ? ಎನ್ನುವುದು ಆತನ ಇನ್ನೊಂದು ಪ್ರಶ್ನೆ. “ಭೂತಗಳ ಕತೆಯಲ್ಲಿ ಇಂತಹ ಸೇಡು ತೀರಿಸಿಕೊಳ‍್ಳುವ ಘಟನಾವಳಿಗಳು ಇವೆ. ಆದರೆ ವೇಷ ಹಾಕುವ ನಲಿಕೆಯವರು, ಪಂಬದರು, ಪಾಣಾರ್ ಗಳು ತಮ್ಮ ಸ್ವಾರ್ಥಕ್ಕಾಗಿ ಭೂತಗಳನ್ನು ದುರುಪಯೋಗ ಮಾಡಿಕೊಂಡ ಉದಾಹರಣೆಗಳು ಕಡಿಮೆ,‌ ಆ ರೀತಿ ನಡೆದುಕೊಂಡವರಿಗೆ ಶಿಕ್ಷೆಯಾಗುತ್ತದೆ ಎಂಬ ನಂಬಿಕೆ ಇದೆ. ಅವರು ವೇಷ ಹಾಕಿದ ನಂತರ ದೈವಗಳಾಗಿ ನಡೆದುಕೊಳ್ಳುತ್ತಾರೆಯೇ ಹೊರತು ಪಾತ್ರಿಗಳಾಗಿ ಅಲ್ಲ” ಎಂದೆ.

“ ಆದರೆ ಕಾಂತಾರ ಚಿತ್ರದಲ್ಲಿ ದೈವ ನರ್ತಕ ತಮ್ಮ ಪರಿವಾರದ ಭೂಮಿಯ ರಕ್ಷಣೆಗಾಗಿ ಗುಳಿಗ ಭೂತದ ಆವಾಹನೆಯಲ್ಲಿ ಸೇಡು ತೀರಿಸಿಕೊಳ್ಳುವ ಘಟನೆ ಇದೆ ಇದು ಕೂಡಾ ಆ ಜನಾಂಗಕ್ಕೆ ಮಾಡಿರುವ ಅಪಚಾರ ಅಲ್ಲವೇ” ಎಂದು ನನ್ನ ಗೆಳೆಯ ಪ್ರಶ್ನಿಸಿದ. ಆತನೇ ಮುಂದುವರಿದು  “ ಕಂಬಳವನ್ನು ಜಂಟಲ್ ಮೆನ್ ಗೇಮ್ ಎನ್ನುತ್ತೀರಾ? ಕಾಂತಾರ ಚಿತ್ರದಲ್ಲಿ ವಂಚನೆ, ಹೊಡೆದಾಟ ಇದೆಯಲ್ಲ ಎಂದು ನಾಲ್ಕನೆಯ ಪ್ರಶ್ನೆ ಹಾಕಿದ.

“ ಕಂಬಳದ ಜೊತೆ ಕೆಲವೊಂದು ಮೂಡನಂಬಿಕೆಗಳು ಥಳಕು ಹಾಕಿರುವುದು ಮತ್ತು ಅದು ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿರುವುದು ನಿಜವಾದರೂ ಅದು ಈಗಲೂ ಜಂಟಲ್ ಮೆನ್ ಗೇಮ್. ಈಗಿನ ರೀತಿಯಲ್ಲಿ ಓಟದ ಸಮಯ ಅಳೆಯಲು ವೈಜ್ಞಾನಿಕವಾದ ವ್ಯವಸ್ಥೆ ಇಲ್ಲದಿದ್ದಾಗಲೂ ಮೋಸ-ವಂಚನೆಗಳು ನಡೆದಿರುವುದು ಮತ್ತು ಅದಕ್ಕಾಗಿ ಹೊಡೆದಾಟಗಳು ನಡೆದದ್ದು ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲವೇ ಇಲ್ಲ ಎಂದು ಹೇಳಬಹುದು”’ ಎಂದೆ. 

“ಹಾಗಿದ್ದರೆ ಇದು ಕಂಬಳ ಕ್ರೀಡೆಯಲ್ಲಿನ ಜಗಳ/ಹೊಡೆದಾಟವೆಲ್ಲ  ಅಪಚಾರ ಅಲ್ಲವೇ?”” ಎಂದು ಗೆಳೆಯ ಕೇಳಿದ.ಭೂ ಸುಧಾರಣೆಯ ಫಲಾನುಭವಿಯೂ ಆಗಿರುವ ಗೆಳೆಯ ಕೇಳಿದ   ಕೊನೆಯ ಪ್ರಶ್ನೆ ಜೊತೆ ಉತ್ತರವನ್ನೂ ಹೇಳಿದ್ದ:“  ನೋಡು ಮಾರಾಯ ನೀನು ಏನೇ ಹೇಳು, ನಮ್ಮೂರಿನ ಭೂಮಾಲೀಕರು, ಉತ್ತರಪ್ರದೇಶ-ಬಿಹಾರದವರ ರೀತಿ ಗುಡಿಸಲುಗಳ ಮುಂದೆ ಕಾಲು ಮೇಲೆ ಕಾಲು ಹಾಕಿ ಒಕ್ಕಲಿನ ಮನೆಗಳಿಗೆ ಬೆಂಕಿ ಹಚ್ಚುವವರಲ್ಲ, ಅದೂ ಒಂದು ಮಗುವಿಗೂ ಬಂದೂಕಿನಿಂದ ಗುಂಡು ಹಾರಿಸಿ ಕೊಲ್ಲುವಷ್ಟು ನಿರ್ದಯರಲ್ಲವಲ್ಲಾ’ ಎಂದು ಹೇಳಿದ.

“” ಹೌದು,  ಜಮೀನಿಗೆ ಸಿಕ್ಕಾಪಟ್ಟೆ ಬೆಲೆ ಬಂದಿರುವ ಈ ಕಾಲದಲ್ಲಿ ಭೂಸುಧಾರಣೆ ಜಾರಿಗೆ ತಂದಿದ್ದರೆ ಸ್ವಲ್ಪ ರಕ್ತಪಾತವಾಗುತ್ತಿತ್ತೋ ಏನೋ? ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶೇಕಡಾ 90ರಷ್ಟು ಧಣಿಗಳು ಬೇರೆ ಜಿಲ್ಲೆಗಳ ಧಣಿಗಳಂತೆ ಭೂ ಸುಧಾರಣೆ ಕಾಯ್ದೆಯ ಕಣ್ಣಿಗೆ ಮಣ್ಣೆರೆಚಿ ನೂರಾರು ಎಕರೆ ಭೂಮಿ ಉಳಿಸಿಕೊಂಡವರಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 70-80ರಷ್ಟು ಭೂ ಸುಧಾರಣೆ ಜಾರಿಗೆ ಬಂದಿದೆ. 

ಭೂಮಾಲೀಕರು ಒಂದು ಹಸುಳೆಯನ್ನು ಕೊಲ್ಲುವಷ್ಟು ಕ್ರೂರಿಗಳಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಚಿತ್ರದಲ್ಲಿ ಧಣಿಗಳ ಜಾತಿಯನ್ನು ನೇರವಾಗಿ ಹೇಳದೆ ಇದ್ದರೂ ಆ ಧಣಿ ಬಂಟ ಸಮುದಾಯದವರು ಎಂದು ಊಹಿಸಿಕೊಳ್ಳಬಹುದು. ದಕ್ಷಿಣ ಕನ್ನಡದ ಬಹುತೇಕ ಜಮೀನ್ದಾರರು ಬಂಟ,ಬ್ರಾಹ್ಮಣ ಮತ್ತು ಜೈನರು. 

ಇವರಲ್ಲಿ ಬಂಟರು ಮಾತ್ರ ಮಾಂಸಹಾರಿಗಳು. ಚಿತ್ರದ ಧಣಿ ಕೋಳಿ-ಹಂದಿಪ್ರಿಯನಾದ ಕಾರಣ ಆತ ಬಂಟ ಜಾತಿಯವನೆಂದು ಹೇಳಬಹುದು ಎಂದು ಹೇಳಿದೆ.(ಹಾಗಿದ್ದರೆ ಇದು ಬಂಟ ಸಮಾಜಕ್ಕೆ ಮಾಡಿರುವ ಅಪಚಾರ ಅಲ್ವೇ? ಎನ್ನುವುದು ನನ್ನ ಗೆಳೆಯನ ಪ್ರಶ್ನೆ.ಈ  ಪ್ರಶ್ನೆಗಳಿಗೆ  ತಿಳಿದಮಟ್ಟಿಗೆ ನಾನು ಉತ್ತರಿಸಿದ್ದೇನೆ. ಉಳಿದಂತೆ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಉತ್ತರಿಸಬೇಕು

ಹೆಡ್ ಬುಷ್ ನಲ್ಲಿನ ವೀರಗಾಸೆಯ ಬಗೆಗಿನ ವಿವಾದಕ್ಕೆ ಪ್ರತಿಕ್ರಿಯಿಸುತ್ತಾ ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕೃತಿಗೆ ಅವಮಾನವಾಗದಂತೆ ನೋಡಿಕೊಳ‍್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿರುವ ಸುನೀಲ್ ಕುಮಾರ್ ಅವರೇ, ಕಾಂತಾರ ಚಿತ್ರದಲ್ಲಿಯೂ ತುಳುನಾಡಿನ ಜಾನಪದಕ್ಕೆ ಮಾತ್ರವಲ್ಲ ದೈವಗಳಿಗೂ ಅವಮಾನವಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಚಿತ್ರ ನಿರ್ಮಾಪಕ-ನಿರ್ದೇಶಕರಿಗೂ ಮರು ಚಿಂತನೆ ನಡೆಸಲು ಕರೆ ನೀಡುತ್ತೀರಾ?- ದಿನೇಶ್ ಅಮಿನ್ ಮಟ್ಟು